DHARWAD

ಕಾಂಗ್ರೆಸ್ ಮುಸ್ಲಿಂ ಲೀಗ್ ಪಾರ್ಟಿ- ಪ್ರಲ್ಹಾದ್ ಜೋಶಿ ಗುಡುಗು!

Pralhad Joshi slams state govt on Cases aquitted on Muslims

ಹುಬ್ಬಳ್ಳಿ: “ರಾಜ್ಯದ ಕಾಂಗ್ರೆಸ್ ಸರ್ಕಾರವು ಮತ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ ಮತಾಂಧ ಶಕ್ತಿಗಳ ಮೇಲಿನ ಕ್ರಿಮಿನಲ್ ಕೇಸ್‌ಗಳನ್ನು ವಾಪಸ್ ಪಡೆಯುತ್ತಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯೋತ್ತರ ಭಾರತದ ‘ಆಧುನಿಕ ಮುಸ್ಲಿಂ ಲೀಗ್’ ಆಗಲು ಹೊರಟಿದೆ,” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಧನ ದರ ಏರಿಕೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಹಾಗೂ ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥ !


ವಲಸಿಗರ ಪತ್ತೆ ಹಚ್ಚುವ ಪ್ರಕ್ರಿಯೆಗೆ (SIR ಪ್ರಕ್ರಿಯೆ) ಕಾಂಗ್ರೆಸ್ ವಿರೋಧಕ್ಕೆ ಜೋಶಿ ತರಾಟೆಗೆ ತೆಗೆದುಕೊಂಡರು. “ಸತತ ಸೋಲುಗಳ ಭೀತಿಯಿಂದ ಕಾಂಗ್ರೆಸ್ ನಾಯಕರು ಈ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದಾರೆ. ಕೇರಳ, ತಮಿಳುನಾಡಿನಲ್ಲಿ ಇದಕ್ಕೆ ವಿರೋಧವಿಲ್ಲ, ಆದರೆ ಇಲ್ಲಿ ಮಾತ್ರ ರಾಜಕೀಯ ಮಾಡುತ್ತಿದ್ದಾರೆ. ಸತತ ಸೋಲಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಅವರನ್ನು ಸಂತೃಪ್ತಿಗೆ ರಾಜ್ಯದ ನಾಯಕರೂ ಅವರ ದಾರಿಯನ್ನೇ ಹಿಡಿದಿದ್ದಾರೆ,” ಎಂದರು.

ಕೇಸ್‌ಗಳ ವಾಪಸ್ ಗೆ ಆಕ್ರೋಶ
“ರಾಜ್ಯ ಸರ್ಕಾರವು ಹುಬ್ಬಳ್ಳಿ ಗಲಭೆ ಸೇರಿದಂತೆ ಇತರೆ ಮತಾಂಧ ಶಕ್ತಿಗಳ ಮೇಲಿನ 165ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳನ್ನು ವಾಪಸ್ ಪಡೆದಿದೆ. ದೇವಸ್ಥಾನಗಳನ್ನು ಅಪವಿತ್ರಗೊಳಿಸಿದವರನ್ನು ರಕ್ಷಿಸುತ್ತಿದೆ. ತೋರ್ಪಡಿಕೆಗೆ ಮಾತ್ರ ಕೆಲವೇ ಕೆಲವು ಕನ್ನಡಪರ ಮತ್ತು ಹಿಂದೂ ಮುಖಂಡರ ಮೇಲಿನ ಕೇಸ್ ವಾಪಸ್ ಪಡೆದ ನಾಟಕ ಆಡುತ್ತಿದೆ.ಈ ತರಹದ ಮತಾಂಧ ತುಷ್ಟೀಕರಣ ನೀತಿಯಿಂದ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಖಚಿತ,” ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ಧಾರವಾಡ ಪ್ರತ್ಯೇಕ ಪಾಲಿಕೆಗೆ ಬೆಂಬಲ!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡಬೇಕೆಂಬ ಸಾರ್ವಜನಿಕರ ಹೋರಾಟ ಹಾಗೂ ಬೇಡಿಕೆಯನ್ನು ಬಿಜೆಪಿ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಜೋಶಿ ಸ್ಪಷ್ಟಪಡಿಸಿದರು.”ಹುಬ್ಬಳ್ಳಿ-ಧಾರವಾಡ ಒಟ್ಟಾಗಿದ್ದರೆ 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರಲಿದ್ದು, ಕೇಂದ್ರದಿಂದ ದೊಡ್ಡ ನಗರಗಳಿಗೆ ಬರುವ ಅತಿ ಹೆಚ್ಚು ಅನುದಾನ ಸಿಗುತ್ತದೆ ಎಂಬ ಕಾರಣಕ್ಕೆ ನಾವು ಈ ಹಿಂದೆ ಸಾರ್ವಜನಿಕರ ಮನವೊಲಿಸಲು ಪ್ರಯತ್ನಿಸಿದ್ದೆವು. ಆದರೆ, ಇದು ಈಗ ಜನರ ಭಾವನಾತ್ಮಕ ವಿಚಾರವಾಗಿದೆ. ಜನರ ಬೇಡಿಕೆಯನ್ನು ಸರ್ಕಾರ ಮಾನ್ಯ ಮಾಡಲೇಬೇಕು. ಈ ಪ್ರಸ್ತಾವನೆ ರಾಜ್ಯಪಾಲರ ಅಂಗಳದಲ್ಲಿದ್ದರೂ ಕಾಂಗ್ರೆಸ್ ನಾಯಕರು ಒಮ್ಮೆಯೂ ರಾಜ್ಯಪಾಲರನ್ನು ಭೇಟಿ ಮಾಡಿ ನೆನಪಿಸುವ ಕೆಲಸ ಮಾಡಿಲ್ಲ. ಕೇವಲ ರಾಜಕಾರಣ ಮಾಡುವುದಷ್ಟೇ ಇವರ ಉದ್ದೇಶ” ಎಂದು ದೂರಿದರು.

“ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಗೆ ಕೇಂದ್ರವನ್ನು ಬೈಯುವವರು ವಾಸ್ತವ ತಿಳಿಯಲಿ. ಪೆಟ್ರೋಲ್ ಮೇಲೆ ಕೇಂದ್ರ ವಿಧಿಸುತ್ತಿರುವುದು ಕೇವಲ 3 ರೂಪಾಯಿ ತೆರಿಗೆ, ಡೀಸೆಲ್ ಮೇಲಂತೂ ಶೂನ್ಯ ತೆರಿಗೆ ಇದೆ. ಆದರೆ, ರಾಜ್ಯ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 27 ರೂಪಾಯಿ ತೆರಿಗೆ ವಸೂಲಿ ಮಾಡುತ್ತಿದೆ. ಹಿಂದೆ 10 ರೂಪಾಯಿ ಕಡಿಮೆ ಮಾಡ್ತೀನಿ ಅಂದಿದ್ದ ಸಿದ್ದರಾಮಯ್ಯ ಈಗ ದರ ಹೆಚ್ಚಿಸಿದ್ದಾರೆ.”

ಕೇಂದ್ರದ ಅಕ್ಕಿಗೆ ಸಿದ್ದು ಪ್ರಚಾರ
“ಗ್ಯಾರಂಟಿ ಯೋಜನೆಯಡಿ 10 ಕೆಜಿ ಧಾನ್ಯ ಕೊಡುವುದಾಗಿ ಹೇಳಿ ಈಗ ವಂಚಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಉಚಿತ ಧಾನ್ಯವನ್ನು ಇವರು ಹಂಚುತ್ತಿದ್ದಾರೆ. ನಮ್ಮ ಧಾನ್ಯಕ್ಕೆ ಇವರು ಕೋಟಿ ಕೋಟಿ ಖರ್ಚು ಮಾಡಿ ಅನ್ನಭಾಗ್ಯದ ಜಾಹೀರಾತು ಹಾಕುತ್ತಿರುವುದು ಎಷ್ಟು ಸರಿ? ಇವರ ಇಡೀ ಸರ್ಕಾರದಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ.

ದರೋಡೆಕೋರ ಸರ್ಕಾರ!”
ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದ ಸಚಿವರು,ಇಂಧನ ದರ ಏರಿಕೆ ಮತ್ತು ಜನನ-ಮರಣ ಪ್ರಮಾಣಪತ್ರಗಳ ದರ ಹೆಚ್ಚಳದ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಸರ್ಕಾರ ಸತ್ತ ಹೆಣದಿಂದಲೂ ಹಣ ವಸೂಲಿ ಮಾಡುವ ದರೋಡೆಕೋರ ಸರ್ಕಾರವಾಗಿದೆ. ಜನನ ಮತ್ತು ಮರಣ ಪ್ರಮಾಣಪತ್ರಗಳ (Birth and Death Certificates) ದರವನ್ನು ಸಹ ದುಪ್ಪಟ್ಟು ಮಾಡಲಾಗಿದೆ. ಸತ್ತವರ ಮೇಲೂ ದುಡ್ಡು ಮಾಡಲು ಹೊರಟಿರುವ ಇಂತಹ ಜನವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ,” ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.

#FreedomTV #PralhadJoshi #Hubballi #DharwadCorporation #CongressGovt #RahulGandhi #AppeasementPolitics #FuelPriceHike #KarnatakaPolitics #BJPVsCongress #HubliDharwad #BreakingNews

Comments (0)

Your email address will not be published. Required fields are marked *

Back to top button