bengaluruರಾಜಕೀಯ

ಪಕ್ಷಗಳಿಗೆ ನಡುಕ-ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕ್ರಮ ರದ್ದು!

CJP Offline Meet at Town hall is cancelled said Police department

ಬೆಂಗಳೂರು: ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಆಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಳೆ ನಗರದ ಟೌನ್ ಹಾಲ್ ಬಳಿ ಆಯೋಜಿಸಲು ಉದ್ದೇಶಿಸಿದ್ದ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸ್ ಇಲಾಖೆ ರದ್ದುಗೊಳಿಸಿದೆ. ಟೌನ್ ಹಾಲ್ ಆವರಣದಲ್ಲಿ ಇಂತಹ ಯಾವುದೇ ಕಾರ್ಯಕ್ರಮಗಳ ಆಯೋಜನೆಗೆ ಕಾನೂನಾತ್ಮಕವಾಗಿ ಅನುಮತಿಯಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮನವಿ ಕೊಟ್ರೂ ಕ್ಯಾನ್ಸಲ್​!


ಮೇ 24ರ ಭಾನುವಾರ ಬೆಳಗ್ಗೆ 11 ಗಂಟೆಗೆ ಟೌನ್‌ಹಾಲ್ ಬಳಿ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಮಾಡಲು ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿತ್ತು. ಈ ಕಾರ್ಯಕ್ರಮದ ಕುರಿತಾದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದವು. ಇದನ್ನು ಗಮನಿಸಿದ ಪೊಲೀಸ್ ಇಲಾಖೆ ಕೂಡಲೆ ನಿದ್ದೆಯಿಂದ ಎದ್ದು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಗೊಂದಲಕ್ಕೆ ತೆರೆ ಎಳೆದಿದೆ.

“ಟೌನ್ ಹಾಲ್ ಬಳಿ ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಿ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷದಿಂದ ಇಲಾಖೆಗೆ ಅಧಿಕೃತ ಅರ್ಜಿ ಬಂದಿಲ್ಲ. ಒಂದು ವೇಳೆ ಮನವಿ ಸಲ್ಲಿಸಿದ್ದರೂ ಅನುಮತಿ ನೀಡಲಾಗುವುದಿಲ್ಲ. ಗೌರವಾನ್ವಿತ ಹೈಕೋರ್ಟ್ ಆದೇಶದ ಪ್ರಕಾರ, ಬೆಂಗಳೂರಿನಲ್ಲಿ ‘ಫ್ರೀಡಂ ಪಾರ್ಕ್’ ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆಗಳನ್ನು ನಡೆಸಲು ಅವಕಾಶವಿಲ್ಲ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಪೋಸ್ಟ್‌ಗಳನ್ನು ನಂಬಿ ಹಂಚಿಕೊಳ್ಳಬಾರದು” ಎಂದು ಪೊಲೀಸ್ ಇಲಾಖೆ ತಿಳಿಸಿದೆ.

‘ಕಾಕ್ರೋಚ್ ಜನತಾ ಪಾರ್ಟಿ’ಯ ನ್ಯೂ ಟ್ರೆಂಡ್!
ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ (CJI) ಸೂರ್ಯಕಾಂತ್ ಶರ್ಮನೀಡಿದ ಹೇಳಿಕೆಯೊಂದರಲ್ಲಿ ಕೆಲವು ಯುವಕರನ್ನು ‘ಜಿರಳೆ’ಗಳಿಗೆ (Cockroaches) ಹೋಲಿಸಿದ್ದರು ಎನ್ನಲಾದ ಸುದ್ದಿ ಇಡೀ ದೇಶಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇಂಟರ್ನೆಟ್‌ನಲ್ಲಿ ಮೀಮ್ಸ್ ಹಾಗೂ ಟ್ರೋಲ್‌ಗಳ ಅಬ್ಬರ ಜೋರಾಗಿತ್ತು.ಈ ಚರ್ಚೆಗಳ ನಡುವೆಯೇ ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿರುವ ಅಭಿಜೀತ್ ದಿಪ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಂಕೇತಿಕವಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಸ್ಥಾಪಿಸಿರುವುದಾಗಿ ಪ್ರಕಟಿಸಿದರು.

ಸೋಶಿಯಲ್ ಮೀಡಿಯಾದಲ್ಲಿ 50 ಲಕ್ಷ ಮೀರಿದ ಫಾಲೋವರ್ಸ್!
ಪ್ರಾರಂಭವಾದ ಕೆಲವೇ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 50 ಲಕ್ಷಕ್ಕೂ (5 Million) ಅಧಿಕ ಫಾಲೋವರ್ಸ್ ಪಡೆಯುವ ಮೂಲಕ CJP ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಟ್ವಿಟ್ಟರ್ ಖಾತೆಯಲ್ಲಿ ಒಂದೇ ವಾರದಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿಸಿತ್ತು. ಆದರೆ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ರಾಷ್ಟ್ರೀಯ ಭದ್ರತೆಯ ನೆಪವೊಡ್ಡಿ ಸದ್ಯ ಈ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದೆ.
ಈ ವಿಭಿನ್ನ ಆಂದೋಲನಕ್ಕೆ ಬೆಂಬಲ ಸೂಚಿಸಿ ಕೇವಲ ಗಂಟೆಗಳ ಅವಧಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಇದರ ಅಧಿಕೃತ ವೆಬ್‌ಸೈಟ್‌ನಲ್ಲಿ ಸದಸ್ಯರಾಗಿ ನೋಂದಾಯಿಸಿಕೊಂಡಿದ್ದರು. ಡಿಜಿಟಲ್ ಜಗತ್ತಿನಲ್ಲಿ ಹವಾ ಎಬ್ಬಿಸಿರುವ ಈ ಜಿರಳೆ ಪಡೆಯ ಆಫ್‌ಲೈನ್ ಹೋರಾಟದ ಮೊದಲ ಯತ್ನಕ್ಕೆ ಬೆಂಗಳೂರಿನಲ್ಲಿ ಸದ್ಯ ಪೊಲೀಸರು ಬ್ರೇಕ್ ಹಾಕಿದ್ದು, ಮುಂದಿನ CJP ನಡೆ ಏನು ಎಂಬುದರ ಕುರಿತು ಭಾರತೀಯ ಯುವಸಮೂಹ ಕಾಯುತ್ತಿದೆ.

#FreedomTV #Bengaluru #CockroachJanataParty #CJP #TownHall #HumanChain #BengaluruPolice #AbhijeetDipke #SocialMediaTrend #FreedomPark #HighCourtOrder #BengaluruNews #TrendingNews

Comments (0)

Your email address will not be published. Required fields are marked *

Back to top button