chamarajnagar

ಸಿಎಂ ಕುರ್ಚಿ ಖಾಲಿಯಿಲ್ಲ ಸುಮ್ಮನಿರಿ- ಮಹದೇವಪ್ಪ!

H.C.Mahdevappa says to media cm post is not empty

ಚಾಮರಾಜನಗರ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಇಂಧನ ದರ ಏರಿಕೆ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದ ಬೆನ್ನಲ್ಲೇ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಅಭಿಮಾನಿಗಳು ಹೊಸ ಬಾಂಬ್ ಸಿಡಿಸಿದ್ದಾರೆ. “ಮುಂದಿನ ಮುಖ್ಯಮಂತ್ರಿ ಮಹದೇವಪ್ಪ” ಎಂದು ಚಾಮರಾಜನಗರದಲ್ಲಿ ಅಭಿಮಾನಿಗಳು ಜೈಕಾರ ಕೂಗಿದ್ದು, ಇದಕ್ಕೆ ಸ್ವತಃ ಸಚಿವರೇ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಡಾ. ರಾಜ್‌ಕುಮಾರ್ ಭವನದ ಬಳಿ ಜಮಾಯಿಸಿದ್ದ ಅಭಿಮಾನಿಗಳು ಹೆಚ್.ಸಿ. ಮಹದೇವಪ್ಪ ಪರವಾಗಿ ಸಿಎಂ ಘೋಷಣೆಗಳನ್ನು ಕೂಗಿ ಕೊಂಡಾಡಿದರು.

ಸಿಎಂ ಹುದ್ದೆಗೆ ಟವಲ್ ಹಾಕೋಕೆ ಆಗೋಲ್ಲ!


ಅಭಿಮಾನಿಗಳ ಸಿಎಂ ಕೂಗಿಗೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ. ಮಹದೇವಪ್ಪ, “ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಯಾವಾಗಲೂ ಶೋಷಿತ ವರ್ಗಗಳ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ ನಾನು ಜನರ ಪರವಾಗಿಯೇ ಇರುತ್ತೇನೆ. ಹೀಗಾಗಿ ಬೀದರ್‌ನಿಂದ ಚಾಮರಾಜನಗರದವರೆಗೂ ಜನ ನನ್ನ ಹೆಸರನ್ನು ಪ್ರೀತಿಯಿಂದ ಕೂಗುತ್ತಾರೆ” ಎಂದರು. “ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಅವರು ಭದ್ರವಾಗಿವಾಗಿದ್ದಾರೆ.ಹಾಗಾಗಿ ನಾನು ಸಿಎಂ ಆಗುವ ಪ್ರಶ್ನೆಯೇ ಇಲ್ಲ. ಸದ್ಯಕ್ಕಂತೂ ಕುರ್ಚಿ ಖಾಲಿ ಇಲ್ಲ ಎಂಬುದನ್ನು ಅಭಿಮಾನಿಗಳ ಅರ್ಥ ಮಾಡಿಕೊಳ್ಳಬೇಕು ಹಾಗೂ ಮೌನವಹಿಸಬೇಕು ಎಂದು ನಾಯಕತ್ವ ಬದಲಾವಣೆಯ ವದಂತಿಗಳಿಗೆ ತೆರೆ ಎಳೆದರು.

ಚುನಾವಣೆ ನಂತರ ಬೆಲೆ ಏರಿಕೆ- ಘೋರ ಅನ್ಯಾಯ!
ದೇಶದಲ್ಲಿ ಸರಣಿಯಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಕುರಿತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಚಿವರು ತೀವ್ರ ವಾಗ್ದಾಳಿ ನಡೆಸಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಏರುಪೇರಾಗುತ್ತಿರುವುದು ಕೇಂದ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು. ಆದರೆ, ಅದನ್ನು ಪೂರ್ವಭಾವಿಯಾಗಿ ಎದುರಿಸಲು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ.ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೂ ಸೈಲಂಟಾಗಿ ಇಂಧನ ದರ ಏರಿಕೆ ಬಗ್ಗೆ ಏನೂ ಮಾತನಾಡದ ಬಿಜೆಪಿ, ಚುನಾವಣೆ ಮುಗಿಯುತ್ತಿದ್ದಂತೆ ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ.ಕೇಂದ್ರ ಸರ್ಕಾರ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಸ್ಥಿತಿಗೆ ತರಲು ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

“ಗಂಟೆ ಬಾರಿಸಿ-ದೀಪ ಹಚ್ಚಿ ಹಿಂಗಿದೆ ಪ್ರಧಾನಿ ನೀತಿ”
ಕೇಂದ್ರದ ಆರ್ಥಿಕ ನಿರ್ವಹಣೆಯನ್ನು ಕೋವಿಡ್ ಸಮಯದ ನಿರ್ಧಾರಗಳಿಗೆ ಹೋಲಿಸಿದ ಮಹದೇವಪ್ಪ, “ಕೋವಿಡ್ ಮಹಾಮಾರಿಯ ಭೀಕರ ಸಂದರ್ಭದಲ್ಲೂ ಕೇಂದ್ರ ಸರ್ಕಾರ ವೈಜ್ಞಾನಿಕ ಕ್ರಮ ಕೈಗೊಳ್ಳುವ ಬದಲು ಗಂಟೆ ಹೊಡೆಯಿರಿ, ಜಾಗಟೆ ಬಾರಿಸಿ, ದೀಪ ಹಚ್ಚಿ ಎಂದು ಜನರಿಗೆ ಕರೆ ನೀಡಿತ್ತು. ದೇಶದ ಪ್ರಧಾನಿಯಾದವರು ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವದಿಂದ ಜನರ ಮತ್ತು ದೇಶದ ಆರ್ಥಿಕತೆಯನ್ನು ರಕ್ಷಣೆ ಮಾಡಬೇಕು.ಆದರೆ ಸದಾ ಮೌಢ್ಯವನ್ನು ಬಿತ್ತಿ ಧರ್ಮ ಧರ್ಮಗಳ ನಡುವೆ ಕಂದಕ ಜಗಳ ಸೃಷ್ಟಿಸಿ ಆ ಕೆಂಡದಲ್ಲಿ ಬಿಸಿ ಕಾಯಿಸಿಕೊಳ್ಳುವ ಜಾಯಮಾನ ಬಿಜೆಪಿಯದ್ದು. ಅವರಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲ” ಎಂದು ಕಿಡಿಕಾರಿದರು.

“ವಿಜಯೇಂದ್ರ ಕೇಂದ್ರದಿಂದ ತೆರಿಗೆ ಪಾಲು ತರಲಿ!
ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಿ ಎಂದು ಬಿ.ವೈ. ವಿಜಯೇಂದ್ರ ನೀಡಿರುವ ಸಲಹೆಗೆ ಸಚಿವರು ಖಡಕ್ ಅಗಿ ಉತ್ತರಿಸಿದ್ದಾರೆ. “ಈ ರೀತಿ ಉಚಿತ ಸಲಹೆ ಕೊಡುವುದರಲ್ಲಿ ವಿಜಯೇಂದ್ರ ಬಹಳ ಜಾಣ. ಕೇಂದ್ರ ಸರ್ಕಾರ ಇಂಧನ ದರವನ್ನು ಗಗನಕ್ಕೇರಿಸಿ, ಎಲ್ಲವನ್ನೂ ಲೂಟಿ ಮಾಡಿ ಈಗ ರಾಜ್ಯ ಸರ್ಕಾರಕ್ಕೆ ತೆರಿಗೆ ಕಡಿಮೆ ಮಾಡಿ ಎಂದರೆ ಹೇಗೆ ಸಾಧ್ಯ? ಇಷ್ಟಕ್ಕೂ ಕೇಂದ್ರದವರು ನಮ್ಮಿಂದ ಜಿಎಸ್‌ಟಿ (GST) ಮೂಲಕ ಹಣ ಪಡೆಯುತ್ತಾರೆ. ಆದರೆ ರಾಜ್ಯದ ಪಾಲನ್ನು ವಾಪಸ್ ಕೊಟ್ಟಿಲ್ಲ. ಕರ್ನಾಟಕದಿಂದ 1 ಲಕ್ಷ ರೂಪಾಯಿ ತೆರಿಗೆ ಸಂಗ್ರಹಿಸಿ ದೆಹಲಿಗೆ ಕೊಂಡೊಯ್ದರೆ, ನಮಗೆ ವಾಪಸ್ ಕೊಡುವುದು ಕೇವಲ 15% ಮಾತ್ರ! ದೇಶದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೂ ನಮಗೆ ಅನ್ಯಾಯ ಮಾಡುತ್ತಿರುವ ಬಿಜೆಪಿಗೆ ನಮ್ಮನ್ನು ಪ್ರಶ್ನಿಸುವ ಹಕ್ಕಿಲ್ಲ” ಎಂದು ಹೆಚ್.ಸಿ. ಮಹದೇವಪ್ಪ ತರಾಟೆಗೆ ತೆಗೆದುಕೊಂಡರು.

#FreedomTV #HCMahadevappa #Chamarajanagar #NextCM #Siddaramaiah #FuelPriceHike

Comments (0)

Your email address will not be published. Required fields are marked *

Back to top button