
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳು ಹಾಗೂ ಅವರ ಉಡುಗೊರೆಗಳ ಕುರಿತು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಲೇವಡಿಗೆ ಬಿಜೆಪಿಯ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಕೆಂಡಾಮಂಡಲರಾಗಿದ್ದು ಮೈಕೊಡವಿ ನಿಂತಿದ್ದಾರೆ. ಪ್ರಧಾನಿ ಬಗ್ಗೆ ಅವರ ಕಾರ್ಯವೈಖರಿಯ ಕುರಿತು ಹಗುರವಾಗಿ ಮಾತನಾಡುವ ರಾಹುಲ್ ಗಾಂಧಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನೈತಿಕತೆ ಉಳಿದಿಲ್ಲ ಎಂದು ಅವರು ಕಲಬುರಗಿಯಲ್ಲಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪ್ರಧಾನಿಗಳಿಂದ ದೇಶದ ಭೂಭಾಗ ಪರಕೀಯರ ಸ್ವತ್ತು!
“ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 5 ದೇಶಗಳ ವಿದೇಶ ಪ್ರವಾಸದಲ್ಲಿ ಇಟಲಿಯ ರಾಜಧಾನಿ ರೋಮ್ಗೆ ಭೇಟಿ ನೀಡಿದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೋಲೇಟ್ ಅನ್ನು ಉಡುಗೊರೆಯಾಗಿ ನೀಡಿದರು. ಇದನ್ನೇ ನೆಪವಾಗಿಟ್ಟುಕೊಂಡು ದೇಶದಲ್ಲಿ ಜ್ವಲಂತ ಸಮಸ್ಯೆಗಳಿವೆ. ಇದನ್ನು ಬಿಟ್ಟು ಮಜಾಮೋಜು ಮಸ್ತಿಯಲ್ಲಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡುತ್ತಿದ್ದಾರೆ. ಇತಿಹಾಸವನ್ನು ಒಮ್ಮೆ ತಿರುವಿ ನೋಡಲಿ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಈ ದೇಶದ ಪ್ರಮುಖ ಭೂಭಾಗಗಳನ್ನೇ ಪರಕೀಯರಿಗೆ ಬಿಟ್ಟುಕೊಟ್ಟರು. ಚೀನಾ, ಭೂತಾನ್,ಬಾಂಗ್ಲಾದೇಶಗಳಿಗೆ ಭಾರತದ ಭೂಪ್ರದೇಶಗಳನ್ನು ಉಡುಗೊರೆಯಾಗಿ ನೀಡಿದ ಇತಿಹಾಸ ಇವರದ್ದು. ಇದರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಪ್ ಚುಪ್ ಆಗಿರುವುದೇಕೆ? ಮಾತನಾಡಲು ಬಾಯಿಲ್ಲವೇ?” ಎಂದು ತೇಲ್ಕೂರ್ ಪ್ರಶ್ನಿಸಿದರು.
ಮೋದಿ ಸಾಂಸ್ಕೃತಿಕ ರಾಯಭಾರಿ-ಬಿಜೆಪಿ ಅಭಾರಿ!
ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸಕ್ಕೆ ಹೋದಾಗ ಭಾರತೀಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ನಮ್ಮ ದೇಶದ ಹೆಮ್ಮೆಯ ರೇಷ್ಮೆ ಸೀರೆ, ಅಸ್ಸಾಂನ ಸಾಂಪ್ರದಾಯಿಕ ಶಾಲು ಹಾಗೂ ಪವಿತ್ರ ಭಗವದ್ಗೀತೆ ಪುಸ್ತಕಗಳನ್ನು ವಿಶ್ವ ನಾಯಕರಿಗೆ ಗೌರವಪೂರ್ವಕವಾಗಿ ಉಡುಗೊರೆ ನೀಡಿದ್ದಾರೆ. ಆದರೆ,ದೇಶದ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಪ್ರಧಾನಿಯವರ ಈ ಮಹತ್ಕಾರ್ಯಗಳು ಕಾಂಗ್ರೆಸ್ ನಾಯಕರ ಕಣ್ಣಿಗೆ ಬಿದ್ದಿಲ್ಲ.ಕಣ್ಣುಗಳೇ ಕುರುಡಾದಾಗ ಕಾಣಲು ಹೇಗೆ ಸಾಧ್ಯ? ಕೇವಲ ಚಾಕಲೇಟ್ ಬಗ್ಗೆ ಲೇವಡಿ ಮಾಡುವುದೇ ಇವರ ರಾಜಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಪ್ರಧಾನಿ ಮಹತ್ವ ಅರಿಯದ ಅಂಧರು!
“ಭಾರತದ ಪ್ರಧಾನಿ ಎಂದರೆ 140 ಕೋಟಿ ಜನರ ಪ್ರತಿನಿಧಿ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ನರೇಂದ್ರ ಮೋದಿ ಅವರ ಬಗ್ಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ಸಿಗರು ಸದಾ ಹಗುರವಾಗಿ, ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಈ ದೇಶದ ಪ್ರಧಾನಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಕನಿಷ್ಠ ಗೌರವವೂ ಇಲ್ಲದಂತಾಗಿದೆ. ಇವರ ಇಂತಹ ಜನವಿರೋಧಿ ಹಾಗೂ ದ್ವೇಷದ ನೀತಿಗಳಿಗೆ ಮುಂಬರುವ ದಿನಗಳಲ್ಲಿ ದೇಶದ ಜನರೇ ತಕ್ಕ ಉತ್ತರ ನೀಡಲಿದ್ದಾರೆ” ಎಂದು ರಾಜಕುಮಾರ ಪಾಟೀಲ್ ತೇಲ್ಕೂರ್ ಎಚ್ಚರಿಸಿದ್ದಾರೆ.
#FreedomTV #Kalaburagi #RajkumarPatilTelkur #PriyankKharge #RahulGandhi #PMModi #ForeignTour #BJPVSCongress #KalyanaKarnataka #KalaburagiNews #KarnatakaPolitics




