
ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಖಾಸಗಿತನಕ್ಕೆ ಧಕ್ಕೆ ತಂದು, ಆಸ್ಪತ್ರೆ ಆವರಣದಲ್ಲೇ ಕಿರುಚಾಡಿ ಸಲ್ಲು ಭಾಯ್ ಕೆಂಗಣ್ಣಿಗೆ ಗುರಿಯಾಗಿದ್ದ ಮುಂಬೈನ ಪಾಪರಾಜಿಗಳಿಗೆ ತಪ್ಪಿನ ಅರಿವಾಗಿದೆ.ಖುದ್ದಾಗಿ ಸಲ್ಮಾನ್ ಖಾನ್ ಅವರ ಬಳಿ ಹೋಗಿ ಕ್ಷಮೆಯಾಚಿಸಿದ್ದು, ಸಲ್ಮಾನ್ ಕೂಡ ತಮ್ಮ ಮುನಿಸನ್ನು ಮರೆತು ಎಂದಿನಂತೆ ನಗುತ್ತಾ ಪೋಸ್ ನೀಡುವ ಹಿರಿತನ ಪ್ರದರ್ಶಿಸಿದ್ದಾರೆ.

ರಾಜಾ ಶಿವಾಜಿ’ ಸಕ್ಸಸ್ ಪಾರ್ಟಿಯಲ್ಲಿ ಮುಖಾಮುಖಿ!
ಬುಧವಾರ ರಾತ್ರಿ ಮುಂಬೈನಲ್ಲಿ ರಿತೇಶ್ ದೇಶ್‌ಮುಖ್ ನಿರ್ದೇಶನ ಮತ್ತು ನಟನೆಯ ‘ರಾಜಾ ಶಿವಾಜಿ’ ಸಿನಿಮಾದ ಅದ್ಧೂರಿ ಸಕ್ಸಸ್ ಪಾರ್ಟಿ ಆಯೋಜಿಸಲಾಗಿತ್ತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ‘ಜೀವಾ ಮಹಾಲಾ’ಎಂಬ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮ ಮುಗಿಸಿ ರಿತೇಶ್ ದೇಶ್‌ಮುಖ್ ಅವರೊಂದಿಗೆ ಸಲ್ಮಾನ್ ಅವರು ಕ್ಯಾಮೆರಾಗಳಿಗೆ ಪೋಸ್ ನೀಡಲು ಹೊರಬಂದಾಗ,ಅಲ್ಲಿ ನೆರೆದಿದ್ದ ಫೋಟೋಗ್ರಾಫರ್‌ಗಳೆಲ್ಲರೂ ಒಟ್ಟಾಗಿ ಸೂಪರ್‌ಸ್ಟಾರ್ ಬಳಿ ಕ್ಷಮೆ ಕೇಳಲು ಮುಂದಾಗಿದ್ದಾರೆ.
“ನಮ್ಮನ್ನು ಕ್ಷಮಿಸಿ ಭಾಯ್” ಎಂದು ಕೂಗಿದ ಛಾಯಾಗ್ರಾಹಕರು
ಸಲ್ಮಾನ್ ಖಾನ್ ಬರುತ್ತಿದ್ದಂತೆ ಸುತ್ತುವರಿದ ಪಾಪರಾಜಿಗಳು, ‘ನಮ್ಮನ್ನು ಕ್ಷಮಿಸಿ ಭಾಯ್, ನಿನ್ನೆ ತಪ್ಪಾಗಿದೆ’ ಎನ್ನುತ್ತಾ ಕೂಗಿದರು. ಇದನ್ನು ಕಂಡ ಸಲ್ಲು ಭಾಯ್, ಫೋಟೋಗ್ರಾಫರ್ ಒಬ್ಬರನ್ನು ಬಿಡುವಂತೆ ತಮ್ಮ ಸೆಕ್ಯೂರಿಟಿ ತಂಡಕ್ಕೆ ಸೂಚಿಸಿದರು. ಅವರೆಲ್ಲರೂ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತಿರುವುದು ಮನವರಿಕೆಯಾಗುತ್ತಿದ್ದಂತೆಯೇ,ಸಲ್ಮಾನ್ ಸನ್ನೆ ಮಾಡುತ್ತಾ, ‘ಎಲ್ಲವೂ ಸರಿ ಹೋಗಿದೆ’ ಎಂದು ಸಿಗ್ನಲ್ ನೀಡಿದ್ದಾರೆ.
ವೈರಲ್ ಆದ ವಿಡಿಯೋ
ಪಾಪರಾಜಿಗಳಲ್ಲೊಬ್ಬ, “ಇವತ್ತು ಯಾರೂ ಕಿರುಚಬೇಡಿ, ಲವ್ ಯೂ ಭಾಯ್” ಎಂದು ಕೂಗಿದಾಗ, ಸಲ್ಮಾನ್ ನಗುತ್ತಾ, “ಹಾ, ಈ ಜಾಗ ಕಿರುಚಾಡಲು ಸರಿಯಾಗಿದೆ (ಆಸ್ಪತ್ರೆಯಲ್ಲ)” ಎಂದು ಟಾಂಗ್ ನೀಡಿದ್ದಾರೆ. ಆದರೂ ಬಿಡದ ಪಾಪರಾಜಿಗಳು ಮಂಗಳವಾರ ರಾತ್ರಿಯ ತಮ್ಮ ವರ್ತನೆಗೆ ಮತ್ತೊಮ್ಮೆ ಕ್ಷಮೆ ಕೇಳಿದಾಗ, ಸಲ್ಮಾನ್ ತಮಾಷೆಯಾಗಿ, “ಸ್ವಲ್ಪ ಜೋರಾಗಿ ಹೇಳಿ,ನಿಮ್ಮ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ!” ಎಂದು ಕಾಲೆಳೆದಿದ್ದಾರೆ. ಸಲ್ಮಾನ್ ಅವರ ಈ ಭರ್ಜರಿ ಕಾಮಿಡಿ ಟೈಮಿಂಗ್ ಕಂಡು ಪಕ್ಕದಲ್ಲೇ ಇದ್ದ ರಿತೇಶ್ ದೇಶ್‌ಮುಖ್ ಜೋರಾಗಿ ನಕ್ಕಿದ್ದಾರೆ.
ಮಂಗಳವಾರ ರಾತ್ರಿ ಆಸ್ಪತ್ರೆ ಎದುರು ಸಲ್ಲು ಗರಂ!
ಮಂಗಳವಾರ ರಾತ್ರಿ ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ತಮ್ಮ ಅತ್ಯಾಪ್ತರನ್ನು ನೋಡಲು ಸಲ್ಮಾನ್ ಹೋಗಿದ್ದರು. ಈ ಸೂಕ್ಷ್ಮ ಸಮಯದಲ್ಲಿ ಪಾಪರಾಜಿಗಳು ಅವರ ಬೆನ್ನಟ್ಟಿ, ಆಸ್ಪತ್ರೆಯ ಆವರಣದಲ್ಲೇ ಸಲ್ಮಾನ್ ಅವರ ಮುಂಬರುವ ‘ಮಾತೃಭೂಮಿ’ ಚಿತ್ರದ ಹೆಸರನ್ನು ಜೋರಾಗಿ ಕೂಗುತ್ತಾ ಗದ್ದಲ ಮಾಡಿದ್ದರು.ಇದರಿಂದ ತೀವ್ರ ಅಸಮಾಧಾನಗೊಂಡ ಸಲ್ಮಾನ್, ‘ನಿಮಗೆ ಹುಚ್ಚು ಹಿಡಿದಿದೆಯೇ? ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಗೆ ದಾಖಲಾಗಿದ್ದಾಗ ಬೇರೆಯವರು ಹೀಗೆ ಗಲಾಟೆ ಮಾಡಿದರೆ ನಿಮಗೆ ಹೇಗನಿಸುತ್ತದೆ?’ ಎಂದು ಖಾರವಾಗಿ ಕ್ಲಾಸ್ ತಗೊಂಡಿದ್ದರು. ಆದರೆ, 24 ಗಂಟೆಯೊಳಗೆ ತಪ್ಪಿನ ಅರಿವಾಗಿ ಪಾಪರಾಜಿಗಳು ಕ್ಷಮೆ ಕೇಳಿದ್ದು, ಸಲ್ಲು ಭಾಯ್ ದೊಡ್ಡ ಮನಸ್ಸು ಮಾಡಿ ಎಲ್ಲವನ್ನೂ ಮರೆತಿದ್ದಾರೆ.
#FreedomTV #SalmanKhan #PaparazziApology #RajaShivajiSuccessParty #RiteishDeshmukh #SalmanKhanAngry #MatrubhoomiMovie #BollywoodUpdates #MumbaiPaparazzi #SalluBhai #EntertainmentNews #KannadaNews #ViralVideoBollywood




