bidarಕ್ರೈಂ ಸ್ಟೋರಿ

ಬೀದರ್‌ನಲ್ಲಿ ವರುಣನ ಅಟ್ಟಹಾಸ-10 ಮಂದಿಗೆ ಗಂಭೀರ ಗಾಯ!

Rain disaster in Bidar 10 people injured

ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಭಾರಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆ ದೊಡ್ಡ ದುರಂತವೊಂದನ್ನು ಸೃಷ್ಟಿಸಿದೆ. ಮಳೆಯ ರಭಸಕ್ಕೆ ಪ್ರಸಿದ್ಧ ವಾಟರ್ ಪಾರ್ಕ್‌ನ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ, ರೂಂನಲ್ಲಿದ್ದ ಮಕ್ಕಳು ಮತ್ತು ಮಹಿಳೆಯರು ಸೇರಿ 10ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.ಕೂಡಲೆ ಗಾಯಾಳುಗಳನ್ನು ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು.ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಮಳೆರಾಯನ ಅವಾಂತರಕ್ಕೆ ಕುಸಿದ ಗೋಡೆ!


ಬೀದರ್ ತಾಲೂಕಿನ ಅಣದೂರು ವಾಡಿ ಗ್ರಾಮದ ಬಳಿ ಇರುವ ಪ್ರಸಿದ್ಧ ‘ಮಾಂಜ್ರಾ ವಾಟರ್ ಪಾರ್ಕ್’ನಲ್ಲಿ ಈ ಅನಾಹುತ ಸಂಭವಿಸಿದೆ. ಮಳೆ ಮತ್ತು ಬಿರುಗಾಳಿ ಜೋರಾದ ಹಿನ್ನೆಲೆಯಲ್ಲಿ ವಾಟರ್ ಪಾರ್ಕ್‌ಗೆ ಬಂದಿದ್ದ ಪ್ರವಾಸಿಗರು ಆಶ್ರಯ ಪಡೆಯಲು ಅಲ್ಲಿದ್ದ ರೂಂ ಒಂದರಲ್ಲಿ ಕುಳಿತಿದ್ದರು. ಸುಮಾರು 15ಕ್ಕೂ ಹೆಚ್ಚು ಜನ ರೂಂನಲ್ಲಿದ್ದ ಸಂದರ್ಭದಲ್ಲಿ, ಮಳೆಯ ಹೊಡೆತಕ್ಕೆ ವಾಟರ್ ಪಾರ್ಕ್‌ನ ಗೋಡೆ ದಿಢೀರನೆ ಕುಸಿದು ಬಿದ್ದಿದೆ. ಗೋಡೆ ಕುಸಿತದ ತೀವ್ರತೆಗೆ ರೂಂನಲ್ಲಿದ್ದ ಬೀದರ್ ತಾಲೂಕಿನ ಕೊಳ್ಳಾರ ಸೇರಿದಂತೆ ವಿವಿಧ ಗ್ರಾಮಗಳ ಪ್ರವಾಸಿಗರು ಅವಶೇಷಗಳಡಿ ಸಿಲುಕಿದರು. ಘಟನೆಯಲ್ಲಿ ಜಯಶ್ರೀ, ನೀಲಮ್ಮ, ಶೀವಲೀಲಾ ಹಾಗೂ ಮಕ್ಕಳಾದ ಆರಾಧ್ಯ, ಶ್ರದ್ಧಾ, ಶ್ರೇಯಸ್ ಸೇರಿದಂತೆ 10ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡರು. ಗಾಯಗೊಂಡ ಮಹಿಳೆಯರ ಕಾಲು ಮುರಿದಿದ್ದು ತಲೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಇನ್ನುಳಿದಂತೆ ಮಕ್ಕಳ ತಲೆಗೂ ಭಾರಿ ಪ್ರಮಾಣದ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ.

ಖಾಸಗಿ ಆಸ್ಪತ್ರೆಗೆ ದಾಖಲು – ಕರುಣಾಜನಕ ಸ್ಥಿತಿಯಲ್ಲಿ ಮಕ್ಕಳು!
ಘಟನೆ ನಡೆದ ತಕ್ಷಣವೇ ಸ್ಥಳೀಯರು ಹಾಗೂ ವಾಟರ್ ಪಾರ್ಕ್ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿ ಬೀದರ್‌ನ ಬ್ರೀಮ್ಸ್ (BRIMS) ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಮಕ್ಕಳ ತಲೆಯ ಭಾಗಕ್ಕೆ ತೀವ್ರ ಗಾಯಗಳಾಗಿರುವ ಹಿನ್ನೆಲೆಯಲ್ಲಿ, ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳು ತುರ್ತಾಗಿ ಆಂಬುಲೆನ್ಸ್ ಸೇವೆಯ ಮೂಲಕ ಮಕ್ಕಳನ್ನು ಸ್ಕ್ಯಾನಿಂಗ್ ಸೆಂಟರ್ ಗೆ ಕರೆದೊಯ್ದು ತಪಾಸಣೆ ನಡೆಸಿದರು. ಸದ್ಯ ಆಸ್ಪತ್ರೆಯ ಬಳಿ ಗಾಯಾಳುಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಾಂಜ್ರಾ ವಾಟರ್ ಪಾರ್ಕ್‌ನ ಕಟ್ಟಡ ನಿರ್ಮಾಣದ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಈಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕುರಿತು ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಅಕಾಲಿಕ ಬಿರುಗಾಳಿ ಮಳೆ ಬೀದರ್, ಭಾಲ್ಕಿ, ಔರಾದ್‌ನಲ್ಲಿ ಸುರಿದಿದ್ದು, ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹಸಿರು ನೆರಳು ಪರದೆ, ಹೈಮಾಸ್ಕ್ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬೀದರ್-ಹುಮನಾಬಾದ್ ರಸ್ತೆಯಲ್ಲಿ ಬೀದರ್ ಮಹಾನಗರ ಪಾಲಿಕೆಯ ಸ್ವಾಗತಾ ಫಲಕ ಮುರಿದ್ದು ಬಿದ್ದು ಕೆಲಹೊತ್ತು ಬೀದರ್-ಹುಮನಬಾದ್ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

#Bidar #BidarRain #WaterParkAccident #ManjraWaterPark #WallCollapse #HeavyRain #KarnatakaWeather #AccidentNews #BRIMS #Hospitalized #BreakingNews #FreedomTV

Comments (0)

Your email address will not be published. Required fields are marked *

Back to top button