ಬೆಳಗಾವಿಯಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ- ಭ್ರಷ್ಟ ಗ್ಯಾಂಗ್ ಪತ್ತೆ!
Lokayukta Raid on Slum board at Belagavi finds theft officers

ಬೆಳಗಾವಿ: ಬಡವರಿಗಾಗಿ ಮೀಸಲಾಗಿದ್ದ ಕೋಟ್ಯಾಂತರ ರೂಪಾಯಿ ಸರ್ಕಾರಿ ಅನುದಾನವನ್ನು ಲೂಟಿ ಮಾಡಿದ ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜಾಲಕ್ಕೆ ಬೆಳಗಾವಿ ಲೋಕಾಯುಕ್ತ ಪೊಲೀಸರು ಖೆಡ್ಡಾ ತೋಡಿದ್ದಾರೆ. ಸರ್ಕಾರದ ಹಣ ದುರುಪಯೋಗ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ಬೃಹತ್ ದಾಳಿ ನಡೆಸಿ, ಕೋಟ್ಯಾಂತರ ಮೌಲ್ಯದ ನಕಲಿ ಬಿಲ್ಗಳು ಹಾಗೂ ಭ್ರಷ್ಟಾಚಾರಕ್ಕೆ ಪೂರಕವಾದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಹಾಗೂ ಸರ್ಕಾರದ ಹಣ ದುರುಪಯೋಗ ಪ್ರಕರಣದ ಅಡಿಯಲ್ಲಿ ಈ ಭರ್ಜರಿ ಬೇಟೆ ನಡೆದಿರುವುದು ವಿಶೇಷ.
ಬಡವರ 600 ಮನೆ ನಿರ್ಮಿಸದೆ 23 ಕೋಟಿ ಗುಳುಂ!
ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ (Slum Board) ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಜಂಟಿಯಾಗಿ ನಡೆಸಿರುವ ಈ ಹಗರಣದ ಕರಾಳ ಮುಖ ತನಿಖೆಯ ಮೂಲಕ ಬಯಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಅನುದಾನದಡಿ ಕೊಳಚೆ ಪ್ರದೇಶದ ಸುಮಾರು 600 ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಬೇಕಿತ್ತು. ಇದಕ್ಕಾಗಿ ಒಟ್ಟು 33 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು.ಆದರೆ ವಾಸ್ತವದಲ್ಲಿ ಆಗಿದ್ದೇ ಬೇರೆ. ಈ ಭ್ರಷ್ಟ ಅಧಿಕಾರಿಗಳು ಒಂದೇ ಒಂದು ಮನೆಯನ್ನೂ ನಿರ್ಮಿಸದೇ, ನಕಲಿ ಬಿಲ್ ಹಾಗೂ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 23 ಕೋಟಿ ರೂಪಾಯಿ ಅನುದಾನವನ್ನು ಗುಳುಂ ಸ್ವಾಹ ಮಾಡಿರುವುದು ಬೆಳಕಿಗೆ ಬಂದಿದೆ.
ಎಂಟು ಕಡೆ ‘ಲೋಕಾ’ ತನಿಖೆ; ಕಚೇರಿ,ಮನೆಗಳ ಮೇಲೆ ದಾಳಿ!
ಲೋಕಾಯುಕ್ತ ಎಸ್ಪಿ ಪ್ರಸನ್ನ ದೇಸಾಯಿ ಅವರ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿ ಸೇರಿದಂತೆ ರಾಮದುರ್ಗ ಪಟ್ಟಣ, ಕೇರೂರ, ಮುಧೋಳ, ವಿಜಯಪುರ, ಧಾರವಾಡ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿರುವ ಆರೋಪಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಅಧಿಕಾರಿಗಳು ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ ಹಗರಣಕ್ಕೆ ಸಂಬಂಧಿಸಿದ 23 ಕೋಟಿ ರೂಪಾಯಿ ಮೌಲ್ಯದ ಅನಧಿಕೃತ ಹಾಗೂ ನಕಲಿ ಬಿಲ್ಗಳನ್ನು ವಶಕ್ಕೆ ಪಡೆಯಲಾಗಿದೆ.
ನಿವೃತ್ತ ಎಇಇ, ಕಾರ್ಯನಿರ್ವಾಹಕ ಅಭಿಯಂತರ ಸೇರಿ ನಾಲ್ವರ ವಿರುದ್ಧ ಎಫ್ಐಆರ್!
ಸರ್ಕಾರದ ಖಜಾನೆಗೆ ಕನ್ನ ಹಾಕಿ ಬಡವರ ಹೊಟ್ಟೆ ಮೇಲೆ ಹೊಡೆದ ಈ ನೀಚ ಕೃತ್ಯಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಪ್ರಮುಖರ ವಿರುದ್ಧ ದೂರು ದಾಖಲಾಗಿದ್ದು,ಶಂಭುಲಿಂಗಪ್ಪ-ಕೊಳಚೆ ನಿರ್ಮೂಲನಾ ಅಭಿವೃದ್ಧಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE),ಲಮಾಣಿ – ಕಾರ್ಯಪಾಲಕ ಇಂಜಿನಿಯರ್ (Executive Engineer),ಎನ್.ಪ್ರಸಾದ್ –ಎನ್ಟಿಸಿಸಿ ಮ್ಯಾನೇಜರ್,ಗಿರಿಮಲ್ಲಪ್ಪ ಜೋಗೂರ –ವಿಜಯಪುರ ಗುತ್ತಿಗೆದಾರ (Contractor) ಈ ಆರೋಪಿಗಳು ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದಾರೆ.
ಬಡವರಿಗೆ ತಲುಪಬೇಕಾದ ಆಶ್ರಯ ಯೋಜನೆಗಳ ಹಣವನ್ನು ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿರುವ ಈ ಜಾಲದ ಮೂಲವನ್ನು ಕೆದಕಲು ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.ಮುಟ್ಟುಗೋಲು ಹಾಕಿಕೊಳ್ಳಲಾದ ದಾಖಲೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಿದ್ದಾರೆ.
#LokayuktaRaid #BelagaviLokayukta #SlumBoardScam #CorruptionExposed #GovernmentFundsLoot #PrasannaDesaiSP #Bengaluru #Vijayapura #Hubballi #CrimeNews #BreakingNews #FreedomTV #KannadaNews




