ದೇಶ/ವಿದೇಶ

ISIS ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ; ಟ್ರಂಪ್ ಬೇಟೆ!

ISIS leader Abu bilal Al minuki hot dead in Nigeria -Trump

ನವದೆಹಲಿ/ವಾಷಿಂಗ್ಟನ್: ಜಾಗತಿಕ ಭಯೋತ್ಪಾದನಾ ಜಾಲದ ವಿರುದ್ಧದ ಹೋರಾಟದಲ್ಲಿ ಅಮೆರಿಕ ಮತ್ತು ನೈಜೀರಿಯಾ ಪಡೆಗಳು ಬೃಹತ್ ಯಶಸ್ಸು ಸಾಧಿಸಿವೆ. ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆಯ ಎರಡನೇ ಪ್ರಭಾವಿ ಕಮಾಂಡರ್ ಎಂದೇ ಗುರುತಿಸಲ್ಪಟ್ಟಿದ್ದ ಅಬು-ಬಿಲಾಲ್ ಅಲ್-ಮಿನುಕಿ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.

ಟ್ರಂಪ್ ನಿರ್ದೇಶನದಡಿ ‘ಮಾಸ್ಟರ್ ಪ್ಲಾನ್’
ಈ ಕುರಿತು ತಮ್ಮ ‘ಟ್ರೂಥ್ ಸೋಶಿಯಲ್’ (Truth Social) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, “ನನ್ನ ನೇರ ನಿರ್ದೇಶನದ ಮೇರೆಗೆ ಅಮೆರಿಕದ ಶೂರಪಡೆಗಳು ಮತ್ತು ನೈಜೀರಿಯಾ ಸೇನೆ ನಡೆಸಿದ ಸುದೀರ್ಘ ಹಾಗೂ ಯೋಜಿತ ಕಾರ್ಯಾಚರಣೆಯಲ್ಲಿ ಜಾಗತಿಕ ಮಟ್ಟದ ಉಗ್ರನ ಅಂತ್ಯವಾಗಿದೆ” ಎಂದು ತಿಳಿಸಿದ್ದಾರೆ.

ಅಲ್-ಮಿನುಕಿ ಯಾರು?
ಅಬು-ಬಿಲಾಲ್ ಅಲ್-ಮಿನುಕಿ ಅಥವಾ ಅಬು ಬಕರ್ ಇಬ್ನ್ ಮುಹಮ್ಮದ್ ಇಬ್ನ್ ಅಲಿ ಅಲ್-ಮೈನುಕಿ ಎಂದು ಗುರುತಿಸಲಾಗುವ ಈತ ಐಸಿಸ್‌ನ ಜಾಗತಿಕ ಉಪ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆಫ್ರಿಕಾ ಖಂಡದಲ್ಲಿ ಅಡಗಿ ಕುಳಿತು ಭಯೋತ್ಪಾದಕ ಚಟುವಟಿಕೆಗಳಿಗೆ ಸಂಚು ರೂಪಿಸುತ್ತಿದ್ದ ಈತನನ್ನು 2023ರಲ್ಲಿಯೇ ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿತ್ತು.

ಜಂಟಿ ಕಾರ್ಯಾಚರಣೆ
ಅಮೆರಿಕದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನೈಜೀರಿಯಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದ್ದು ಆಪರೇಷನ್ ಯಶಸ್ವಿಯಾಗಿದ್ದು,ಐಸಿಸ್‌ಗೆ ಹಿನ್ನಡೆಯಾಗಿದೆ. ಈ ಹತ್ಯೆಯೊಂದಿಗೆ ಐಸಿಸ್‌ನ ಜಾಗತಿಕ ಕಾರ್ಯಾಚರಣೆಯ ಶಕ್ತಿ ಗಣನೀಯವಾಗಿ ಕುಗ್ಗಿದೆ ಎಂದು ಮೂಲಗಳು ಹೇಳಿವೆ. ಉಗ್ರಗಾಮಿ ಚಟುವಟಿಕೆಯ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ನೈಜೀರಿಯಾ ಸರ್ಕಾರಕ್ಕೆ ಟ್ರಂಪ್ ಅಭಿನಂದನೆ ಸಲ್ಲಿಸಿದ್ದು ನೈಜೀರಿಯಾ ಪ್ರಜೆಗಳಿಗೆ ಕೃತಜ್ಱತೆ ಸಲ್ಲಿಸಿದರು.

ಆಫ್ರಿಕಾದಲ್ಲಿ ಅಮೆರಿಕದ ಆಪರೇಷನ್!
2025ರ ನಂತರ ನೈಜೀರಿಯಾದ ಸೊಕೊಟೊ ರಾಜ್ಯದಲ್ಲಿ ಅಮೆರಿಕ ನಡೆಸುತ್ತಿರುವ ವಾಯುದಾಳಿಗಳು ತೀವ್ರಗೊಂಡಿವೆ. ಈ ಭಾಗದಲ್ಲಿ ಸಕ್ರಿಯವಾಗಿರುವ ‘ಇಸ್ಲಾಮಿಕ್ ಸ್ಟೇಟ್ ಇನ್ ದಿ ಸಹೇಲ್’ ಹಾಗೂ ‘ಬೊಕೊ ಹರಾಮ್’ ಉಗ್ರಗಾಮಿ ಸಂಘಟನೆಗಳ ವಿರುದ್ಧ ಅಮೆರಿಕ ತನ್ನ ನೂರಾರು ಸೈನಿಕರನ್ನು ನಿಯೋಜಿಸಿ ತರಬೇತಿ ನೀಡುತ್ತಿದೆ. ಅಲ್-ಮಿನುಕಿ ಹತ್ಯೆಯು ಈ ಭಾಗದಲ್ಲಿ ಶಾಂತಿ ಸ್ಥಾಪನೆಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲು ಎಂದು ಹೇಳಲಾಗಿದೆ.

“ಈತ ಇನ್ಮುಂದೆ ಆಫ್ರಿಕಾದ ಜನರನ್ನು ಭಯಭೀತರನ್ನಾಗಿಸಲು ಸಾಧ್ಯವಿಲ್ಲ ಅಥವಾ ಅಮೆರಿಕನ್ನರ ಮೇಲೆ ದಾಳಿಗೆ ಯಾವುದೇ ಸಂಚು ರೂಪಿಸಲಾರ. ಇದು ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟಕ್ಕೆ ಸಂದ ದೊಡ್ಡ ಗೆಲುವು,” ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

#FreedomTV #DonaldTrump #ISIS #AbuBilalAlMinuki #TerrorismEliminated #USA #Nigeria #GlobalNews #AntiTerrorOperation #WorldPolitics #InternationalSecurity #ಐಸಿಸ್ #ಡೊನಾಲ್ಡ್ಟ್ರಂಪ್ #ಭಯೋತ್ಪಾದನೆನಿರ್ಮೂಲನೆ #ಅಮೆರಿಕ #ನೈಜೀರಿಯಾ

Comments (0)

Your email address will not be published. Required fields are marked *

Back to top button