ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ-ವಂಚಿತರಿಗೆ ನ್ಯಾಯ ಖಂಡಿತ!
Belagavi DC and police commissioner assures to the victims of Shivam associates investment scandal

ಬೆಳಗಾವಿ: ಹೂಡಿಕೆ ಮಾಡಿದ ಹಣಕ್ಕೆ ದುಪ್ಪಟ್ಟು ಲಾಭದ ಆಮಿಷವೊಡ್ಡಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ‘ಶಿವಂ ಅಸೋಸಿಯೇಟ್ಸ್’ (Shivam Associates) ಮಾಲೀಕ ಶಿವಾನಂದ ನೀಲಣ್ಣನವರ್‌ನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಈ ಹಗರಣದಲ್ಲಿ ಈಗಾಗಲೇ 300 ರಿಂದ 400 ಕೋಟಿ ರೂಪಾಯಿಗಳಿಗೂ ಅಧಿಕ ಮಾಹಿತಿ ಪುರಾವೆಗಳು ದೊರೆತಿದ್ದು, ಪ್ರಕರಣವನ್ನು ಸಿಐಡಿ (CID) ತನಿಖೆಗೆ ಹಸ್ತಾಂತರಿಸಲು ಶಿಫಾರಸು ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹೇಳಿದರು. ವಂಚಿತರಿಗೆ ಖಂಡಿತ ನ್ಯಾಯ ದೊರೆಯಲಿದೆ ಎಂದು ಪುನರುಚ್ಚರಿಸಿದರು.

ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹೇಳುವಂತೆ ಅನಾಮಧೇಯ ವ್ಯಕ್ತಿಯೊಬ್ಬರು ಸೆಬಿ (SEBI) ಮತ್ತು ಸಿಐಡಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಶಿವಂ ಅಸೋಸಿಯೇಟ್ಸ್ ಕಚೇರಿಯನ್ನು ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ “ಒಂದು ಲಕ್ಷಕ್ಕೆ 3% ಬಡ್ಡಿ” ನೀಡುತ್ತೇವೆ ಎಂಬ ಜಾಹೀರಾತು ನೀಡಿ ಜನರನ್ನು ಸೆಳೆಯಲಾಗುತ್ತಿತ್ತು.ಆದರೆ ಆರ್‌ಬಿಐ (RBI) ಲಿಸ್ಟ್‌ನಲ್ಲಿ ಈ ಸಂಸ್ಥೆ ನೋಂದಣಿಯಾಗಿರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಚಾಲಕನಿಂದ ಕೋಟ್ಯಧೀಶ- ಶಿವಾನಂದನ ಕಿಲಾಡಿ ಆಟ!
ಆರೋಪಿ ಶಿವಾನಂದ ನೀಲಣ್ಣನವರ್ ಕೇವಲ ಪಿಯುಸಿ ಓದಿದ್ದು, ಈ ಹಿಂದೆ ಬೆಳಗಾವಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ವೃತ್ತಿ ಆರಂಭಿಸಿದ್ದ.ನಂತರ ಐಸ್ ಕ್ರೀಮ್ ಫ್ಯಾಕ್ಟರಿ ನಡೆಸುತ್ತಿದ್ದ ಈತ, 2016 ರಿಂದ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಲು ಶುರು ಮಾಡಿದ್ದ.ಆತನ ಚಾರ್ಟರ್ಡ್ ಅಕೌಂಟೆಂಟ್ (CA) ಪರಿಶೀಲಿಸಿದಾಗ ಸುಮಾರು 300 ರಿಂದ 400 ಕೋಟಿ ರೂಪಾಯಿ ಬ್ಯಾಲೆನ್ಸ್ ಶೀಟ್ ಪತ್ತೆಯಾಗಿದೆ. ರಿಯಲ್ ಎಸ್ಟೇಟ್, ಮೀನುಗಾರಿಕೆ ಮತ್ತು ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿರುವುದಾಗಿ ಆರೋಪಿ ಹೇಳುತ್ತಿದ್ದಾನಾದರೂ, ಪೊಲೀಸರೊಂದಿಗೆ ತನಿಖೆಗೆ ಸಹಕರಿಸುತ್ತಿಲ್ಲ.
ಡಿಸಿ ಕಳವಳ!
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರತಿಕ್ರಿಯಿಸಿ, “ಎಷ್ಟೋ ಜನರು ತಮ್ಮ ಆಸ್ತಿ-ಜಮೀನುಗಳನ್ನು ಮಾರಿ ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಇದು ಕೇವಲ ಒಂದು ಜಿಲ್ಲೆಗೆ ಸೀಮಿತವಾದ ಪ್ರಕರಣವಲ್ಲ,ಅಂತರ್ ರಾಜ್ಯ ವಂಚನೆ ಜಾಲವಾಗಿದೆ.ಪ್ರಾಥಮಿಕ ತನಿಖೆಯಲ್ಲಿ ಇದೊಂದು ಪಕ್ಕಾ ವಂಚನೆ ಸ್ಕೀಂ ಎಂದು ತಿಳಿದುಬಂದಿದೆ”ಎಂದರು.ಶಿವಾನಂದನ ಜೊತೆಗಿರುವ ಸಹಚರರಿಗೂ ಇಂದು ಸಂಜೆ ವೇಳೆಗೆ ನೋಟೀಸ್ ನೀಡಲಾಗುವುದು.ಹಣ ಕಳೆದುಕೊಂಡವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಲು ಕೋರಲಾಗಿದೆ.ವಶಪಡಿಸಿಕೊಂಡಿರುವ ಬಾಂಡ್ ಮತ್ತು ಚೆಕ್‌ಗಳ ಮೂಲಕ ಹಣ ವಾಪಸ್ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಡಿಸಿ ಭರವಸೆ ನೀಡಿದ್ದಾರೆ.ಈ ಬೃಹತ್ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲು ಪ್ರಕರಣವನ್ನು ಇಂದು ಸಿಐಡಿಗೆ ಹಸ್ತಾಂತರಿಸಲಾಗುತ್ತಿದೆ.
#FreedomTV #BelagaviCrime #ShivamAssociates #FraudCase #ShivanandNeelannavar #InvestmentScam #BelagaviPolice #CIDInvestigation #FinancialFraud #KarnatakaNews #ಬೆಳಗಾವಿ #ಶಿವಂಅಸೋಸಿಯೇಟ್ಸ್ #ವಂಚನೆ #ಪೊಲೀಸ್_ದಾಳಿ




