Tamil nadu

ವಿಜಯ್ ಸ್ವಾಮಿ ಕಾರ್ಯ ಸ್ವಕಾರ್ಯ? ಜನ ನಾಯಗನ್’ ಪೈರಸಿ- 9 ಮಂದಿ ಅರೆಸ್ಟ್!

VIjay Jananayagan Movie piracy- Action Taken

ಚೆನ್ನೈ: ದಕ್ಷಿಣ ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್​​ ನಟನೆಯ ಕೊನೆ ಚಿತ್ರ ‘ಜನ ನಾಯಗನ್’ ಲೀಕ್ ಆದ ಪ್ರಕರಣ ಕುರಿತು ಈಗಾಗಲೇ 3 ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದ್ದು 9 ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.ವಿಜಯ್ ಸಿಎಂ ಆದ ಬೆನ್ನಲ್ಲೇ ತಮ್ಮ ವೈಯಕ್ತಿಕ ವಿಚಾರದಲ್ಲೂ ಹಸ್ತಕ್ಷೇಪ ವಹಿಸಿರುವುದು ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿದ್ದ ತಮಿಳುನಾಡಿನಾದ್ಯಂತ ಭಾರಿ ಸುದ್ದಿ ಸೃಷ್ಟಿಯಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಹೆಚ್.ವಿನೋದ್ ನಿರ್ದೇಶನದಲ್ಲಿ ಮೂಡಿಬಂದಿದ್ದು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ನಟನಾಗಿ ವಿಜಯ್ ಕೊನೆಯ ಚಿತ್ರ ಎಂದು ಪರಿಗಣಿಸಲಾದ ಈ ‘ಜನ ನಾಯಗನ್’ ಚಲನಚಿತ್ರೋದ್ಯಮದಲ್ಲಿ ಭಾರಿ ನಿರೀಕ್ಷೆಗಳನ್ನು ಸೃಷ್ಟಿಸಿತ್ತು. ಸಿನಿಮಾ ಇದೇ ಸಾಲಿನ ಜನವರಿ 9ಕ್ಕೆ ತೆರೆಕಾಣಬೇಕಿತ್ತು.ಆದರೆ ಪೈರಸಿಯ ಪೆಡಂಬೂತ ಚಿತ್ರಕ್ಕೆ ತಡೆಯೊಡ್ಡಿತ್ತು.

9 ಮಂದಿ ಕಂಬಿಯ ಹಿಂದೆ!
ಬಿಡುಗಡೆ ದಿನಾಂಕ ಜಟಾಪಟಿಯ ಸನ್ನಿವೇಶದಲ್ಲೇ ಆನ್‌ಲೈನ್‌ನಲ್ಲಿ ಈ ಚಿತ್ರ ಸೋರಿಕೆಯಾಗಿ, ಭಾರಿ ವಿವಾದ ಸೃಷ್ಟಿಯಾಯಿತು. ಪ್ರಕರಣವನ್ನು ಇಡೀ ಭಾರತೀಯ ಚಿತ್ರರಂಗದ ಮೇರು ನಟರು ಖಂಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸೈಬರ್ ಅಪರಾಧ ಪೊಲೀಸರು ಈವರೆಗೆ ಒಂಬತ್ತು ಜನರನ್ನು ಬಂಧಿಸಿದ್ದಾರೆ.

ಗೂಂಡಾ ಕಾಯ್ದೆ-ಪ್ರಶಾಂತ್, ಸೆಲ್ವಂ ಮತ್ತು ಬಾಲಕೃಷ್ಣನ್ ಎಂಬ ಮೂವರು ಆರೋಪಿಗಳನ್ನು ಈಗ ಸೈಬರ್ ಅಪರಾಧ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ಪ್ರಮುಖ ಆರೋಪಿಯಾಗಿದ್ದು, ಮತ್ತೊಂದು ಸಿನಿಮಾದಲ್ಲಿ ಸ್ವತಂತ್ರ ಸಹಾಯಕ ಸಂಪಾದಕನಾಗಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನ ನಾಯಗನ್ ಗೆ ಹಿನ್ನಡೆ: ಚಿತ್ರಮಂದಿರಗಳಲ್ಲಿ ಅಧಿಕೃತ ಬಿಡುಗಡೆಗೂ ಮುನ್ನವೇ ವಿಜಯ್ ಚಿತ್ರ ಹಲವಾರು ಅಡೆತಡೆ ಎದುರಿಸಿತ್ತು. ಸೆನ್ಸಾರ್ ಪ್ರಮಾಣೀಕರಣಕ್ಕೆ ಸಂಬಂಧಿಸಿದ ವಿಳಂಬ ಮತ್ತು ನಂತರದ ಪೈರಸಿ ಪೆಡಂಭೂತ ಆಗಿತ್ತು. ಬಹುತೇಕ ಗುಣಮಟ್ಟದ ದೃಶ್ಯಗಳ ಸೋರಿಕೆ ತಮಿಳು ಚಲನಚಿತ್ರೋದ್ಯಮವನ್ನು ದಿಗ್ಭ್ರಮೆಗೊಳಿಸಿತ್ತು ನಂತರ ಅತೀವ ಖಂಡನೆಗೆ ಒಳಗಾಗಿತ್ತು.

ಸೂಪರ್‌ಸ್ಟಾರ್ ರಜನಿಕಾಂತ್, ಉಲಗ ನಾಯಗನ್ ಕಮಲ್ ಹಾಸನ್ ಸೇರಿದಂತೆ ಹಲವಾರು ಸಿನಿಗಣ್ಯರು ಈ ಪೈರಸಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ನಿರ್ಮಾಪಕರ ಸಂಘವೂ ಪೊಲೀಸರು ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿತ್ತು.
ದಳಪತಿ ವಿಜಯ್ ನ ಕೊನೆಯ ಚಿತ್ರ ಜನ ನಾಯಗನ್​​ ಅನ್ನು ಕನ್ನಡ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರ ಸಂಸ್ಥೆಯಾದ ಕೆವಿಎನ್​ ನಿರ್ಮಾಣ ಮಾಡಿದೆ. ವೆಂಕಟ್ ಕೆ.ನಾರಾಯಣ್ ಬಂಡವಾಳ ಹೂಡಿರುವ ಈ ಬಹುನಿರೀಕ್ಷಿತ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಹೆಚ್.ವಿನೋದ್ ನಿರ್ದೇಶನದ ಸಿನಿಮಾಗೆ ಸತ್ಯನ್ ಸೂರ್ಯನ್ ಛಾಯಾಗ್ರಹಣ ಮತ್ತು ಪ್ರದೀಪ್ ಇ ರಾಘವ್ ಅವರ ಸಂಕಲನವಿದೆ.ಏನೇ ಆಗಲಿ ವಿಜಯ್ ಟಿವಿಕೆ ಪಕ್ಷದಡಿ ತಮಿಳುನಾಡಿನ ಸಿಎಂ ಆದ ಮೇಲೆ ತನ್ನ ವೈಯಕ್ತಿಕ ಸಿನಿಮಾಗೆ ಆದ ಅನ್ಯಾಯಕ್ಕೆ ಕೂಡಲೆ ಕ್ರಮಕ್ಕೆ ಮುಂದಾಗಿರುವುದು ಚಿತ್ರರಂಗದಲ್ಲಿ ಪ್ರಶಂಸೆಗೆ ಒಳಪಟ್ಟರೂ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

#JanaNayagan #ThalapathyVijay #PiracyCase #VijayCM #KVNProductions #HVinoth #TamilCinema #GoondasAct #CinemaPiracy #KollywoodNews #PoojaHegde #FreedomTV #TrendingNews

Comments (0)

Your email address will not be published. Required fields are marked *

Back to top button