
ಶ್ರೀನಿವಾಸಪುರ: 2028ರ ವಿಧಾನಸಭಾ ಚುನಾವಣೆ ನನ್ನ ಜೀವನದ ಕೊನೆಯ ಚುನಾವಣೆ. ರಾಜ್ಯದಲ್ಲಿ ಮುಂದಿನ ಬಾರಿ ಖಚಿತವಾಗಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಸಚಿವ ಸಂಪುಟದಲ್ಲಿ ನಾನು ಮಂತ್ರಿಯಾಗುವುದು ನೂರಕ್ಕೆ ನೂರರಷ್ಟು ಖಚಿತ,” ಎಂದು ಹಿರಿಯ ಜೆಡಿಎಸ್ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ನಾಯಕತ್ವದ ಗೊಂದಲಗಳಿಗೆ ತೆರೆ ಎಳೆಯುವ ಜೊತೆಗೆ ರಾಜಕೀಯ ನಿವೃತ್ತಿಯ ಬಗ್ಗೆಯೂ ಮಹತ್ವದ ಸುಳಿವು ನೀಡಿದರು.
ರಮೇಶ್ ಕುಮಾರ್ ಇರುವವರೆಗೂ ನಾನು ಆ್ಯಕ್ಟಿವ್!
ಇತ್ತೀಚೆಗೆ ಕೋಲಾರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್ ಶ್ರೀನಿವಾಸಪುರ ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡುತ್ತಿರುವುದು ಟಿಕೆಟ್ ಬದಲಾವಣೆಯ ಚರ್ಚೆಗೆ ಗ್ರಾಸವಾಗಿದೆಯೇ ಎಂಬ ವಿಚಾರ ಹರಿದಾಡಿತ್ತು. ಈ ಬಗ್ಗೆ ಖಡಕ್ ಆಗಿ ಉತ್ತರಿಸಿದ ವೆಂಕಟಶಿವಾರೆಡ್ಡಿ, “ಮುಂದಿನ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಚುನಾವಣಾ ರಾಜಕೀಯದಲ್ಲಿ ಸ್ಪರ್ಧಿಸುವವರೆಗೂ ನನ್ನ ಸ್ಪರ್ಧೆ ಫಿಕ್ಸ್ ಎಂದು ಹೇಳಿದರು. 2028ರ ನಂತರ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಲಿದ್ದೇನೆ” ಎಂದು ಹೇಳಿದರು.
ಟಿಕೆಟ್‌ಗಾಗಿ ನಾನೆಂದೂ ಅರ್ಜಿ ಹಾಕಿದವನಲ್ಲ!
ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಜಿ.ಕೆ. ವೆಂಕಟಶಿವಾರೆಡ್ಡಿ “ನಾನು ರಾಜಕೀಯದಲ್ಲಿ ಹಿರಿಯ ಶಾಸಕ. ಪಕ್ಷವೇ ನನ್ನ ಸೇವೆಯನ್ನು ಗುರುತಿಸಿ ಜವಾಬ್ದಾರಿ ನೀಡಿದೆ. ನಾನು ಎಂದಿಗೂ ಟಿಕೆಟ್‌ಗಾಗಿ ಅರ್ಜಿ ಹಾಕಿದವನಲ್ಲ. ಕ್ಷೇತ್ರದ ಜನರ ಹಿತದೃಷ್ಟಿಯಿಂದ ಹಾಗೂ ತಾಲೂಕಿನ ಸರ್ವತೋಮುಖ ಪ್ರಗತಿಗಾಗಿ ಮತ್ತೊಮ್ಮೆ ಗೆದ್ದು ಜನರ ಸೇವೆ ಮಾಡುವುದೇ ನನ್ನ ಅಂತಿಮ ಗುರಿ,” ಎಂದು ಪ್ರತಿಕ್ರಿಯಿಸಿದರು.
ಕೈಗಾರಿಕಾ ಕಾರಿಡಾರ್‌ಗೆ ಬದ್ಧತೆ
ಕ್ಷೇತ್ರದಲ್ಲಿ ಚರ್ಚೆಯಲ್ಲಿರುವ ಕೈಗಾರಿಕಾ ಕಾರಿಡಾರ್ ವಿಚಾರವಾಗಿ ಮಾತನಾಡಿದ ಶಾಸಕರು, “ಕೆಲವರು ಕೇವಲ ರಾಜಕೀಯ ಕಾರಣಗಳಿಗಾಗಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ತಾಲೂಕಿನ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ನಾನು ಎಂದಿಗೂ ಕಟಿಬದ್ಧ ” ಎಂದು ಸ್ಪಷ್ಟಪಡಿಸಿದರು.
ವೆಂಕಟಶಿವಾರೆಡ್ಡಿ ಅವರ ಈ “ನಿವೃತ್ತಿ ಘೋಷಣೆ” ಮತ್ತು “ಸಚಿವ ಸ್ಥಾನದ ವಿಶ್ವಾಸ” ಈಗ ಕೋಲಾರ ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದಕ್ಕೆ ರಮೇಶ್ ಕುಮಾರ್ ಬಣ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
#GKVenkataShivaReddy #Srinivaspur #JDS #NDA #KarnatakaPolitics2028 #KolarPolitics #RameshKumar #FreedomTV #KannadaNews #BreakingNews #AssemblyElection




