
ಮೈಸೂರು: ರಾಜ್ಯದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನಲ್ಲಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ
ಧಾರ್ಮಿಕ ನಂಬಿಕೆಗಳಿಗೆ ಮನ್ನಣೆ ನೀಡಲಿದ್ದು, ಕೇಸರಿ ಶಾಲು ಧಾರ್ಮಿಕ ಸಂಕೇತಗಳಡಿ ಮಾನ್ಯವಿರದ ಕಾರಣ ಅದನ್ನು ನಿರ್ಬಂಧಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹಿಜಾಬ್ ವಿಚಾರದಲ್ಲಿ ಬಿಜೆಪಿಯ ತಕರಾರಿನ ಕುರಿತು ಮಾತನಾಡಿದ ಸಿಎಂ, “ಯಾವ ಯಾವ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ಈಗಾಗಲೇ ಚಾಲ್ತಿಯಲ್ಲಿವೆಯೋ ಅವುಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ವಿದ್ಯಾರ್ಥಿಗಳು ಜನಿವಾರ, ರುದ್ರಾಕ್ಷಿ, ಶಿವದಾರ ಅಥವಾ ಹಿಜಾಬ್ ಧರಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಹೊಸದಾಗಿ ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಬರುವುದಕ್ಕೆ ಅವಕಾಶವಿಲ್ಲ” ಎಂದು ತಿಳಿಸಿದರು.
ಮೋದಿ ಬೆಂಗಾವಲು ವಾಹನ ಕಡಿತ: ವೈಯಕ್ತಿಕ
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನಗಳ ಸಂಖ್ಯೆ ಕಡಿತಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, “ಮೋದಿ ಅವರ ಈ ನಿರ್ಧಾರ ಸರಿಯಾದ ಕ್ರಮವಲ್ಲ. ಇತರ ರಾಜ್ಯಗಳಲ್ಲಿ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಗಮನಿಸಿ, ನಂತರ ನಮ್ಮ ರಾಜ್ಯದಲ್ಲಿ ತೀರ್ಮಾನ ಮಾಡುತ್ತೇವೆ” ಎಂದರು.
ಸಂಪುಟ ಪುನಃರಚನೆ ಕುರಿತಾಗಿ ದೆಹಲಿ ಭೇಟಿ
ರಾಜ್ಯ ರಾಜಕಾರಣದ ಕುತೂಹಲಕಾರಿ ವಿಷಯವಾದ ಸಂಪುಟ ಪುನಾರಚನೆಯ ಬಗ್ಗೆ ಮಾತನಾಡಿದ ಅವರು, “ಹೈಕಮಾಂಡ್ ಕರೆದಾಗ ದೆಹಲಿಗೆ ಹೋಗುತ್ತೇನೆ. ಸಂಪುಟ ಪುನಾರಚನೆ ಆಗಬೇಕಿದೆ, ಆದರೆ ಹೈಕಮಾಂಡ್ ಸೂಚನೆ ನೀಡಿದ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದರು.
ನೀಟ್ (NEET) ಪರೀಕ್ಷೆ ರದ್ದು ವಿಚಾರ
ಕೇಂದ್ರ ಸರ್ಕಾರ ನಡೆಸುವ ನೀಟ್ ಪರೀಕ್ಷೆಯ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ಸರಿಯಾಗಿ ನಡೆಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಅನ್ಯಾಯವಾಗುತ್ತಿದೆ. ಈಗಾಗಲೇ ಮಾನಸಿಕವಾಗಿ ಜರ್ಜರಿತವಾಗಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಯಾವ ಉತ್ತರ ನೀಡುತ್ತದೆ. ಕರ್ನಾಟಕದಲ್ಲಿ ಸಿಇಟಿ (CET) ಪರೀಕ್ಷೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿದ್ದೇವೆ” ಎಂದು ಹೇಳಿದರು. ಪರೀಕ್ಷಾ ಪ್ರಕ್ರಿಯೆಯಲ್ಲಿ ಮೋದಿ ಸರ್ಕಾರದ ನಿರ್ಲಕ್ಷ್ಯತೆ ವಿರುದ್ಧ ವಾಗ್ದಾಳಿ ನಡೆಸಿದರು.
#Siddaramaiah #Mysuru #HijabControversy #KarnatakaPolitics #FreedomTV #Congress #NEET #PMModi #CabinetExpansion #KannadaNews




