ವಿಜಯ್ ಯು-ಟರ್ನ್: ರಾಧನ್ ಪಂಡಿತ್ ನೇಮಕಾತಿ ಆದೇಶ ವಾಪಸ್!
Radha Pandit Appointment revoke by Vijay government

ಚೆನ್ನೈ: ವಿಶೇಷ ಕರ್ತವ್ಯಾಧಿಕಾರಿ (OSD-Political) ಹುದ್ದೆಗೆ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ರವರನ್ನು ನೇಮಿಸಿಕೊಂಡ ಬೆನ್ನಲ್ಲೇ ತಮಿಳುನಾಡಿನೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಮುಖ್ಯಮಂತ್ರಿ ಜೋಸೆಫ್ ವಿಜಯ್ ಕೂಡಲೆ ರಾಧನ್ ಪಂಡಿತ್ ವೆಟ್ರಿವೇಲ್ ಅವರ ನೇಮಕಾತಿ ಆದೇಶವನ್ನು ರದ್ದುಗೊಳಿಸಿದ್ದಾರೆ. ಒಂದೇ ದಿನದಲ್ಲಿ ನಡೆದ ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ವಿರೋಧಕ್ಕೆ ಕಾರಣವೇನು?
ಟಿವಿಕೆ (TVK) ವಕ್ತಾರರೂ ಆಗಿರುವ ರಿಕ್ಕಿ ರಾಧನ್ ಪಂಡಿತ್ ಜ್ಯೋತಿಷ್ಯ ಶಾಸ್ತ್ರದಲ್ಲಿ ತೊಡಗಿಸಿಕೊಂಡಿರುವವರು. ಜ್ಯೋತಿಷ್ಯಕ್ಕೆ ಸಂಬಂಧಿಸಿದ ವ್ಯಕ್ತಿಗೆ ಸರ್ಕಾರದ ಅಧಿಕೃತ ಹುದ್ದೆ ನೀಡಿರುವುದನ್ನು ದ್ರಾವಿಡ ನೆಲದ ತತ್ವಗಳಿಗೆ ವಿರುದ್ಧವಾದುದು ಎಂದು ಮಿತ್ರಪಕ್ಷಗಳು ಹಾಗೂ ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು.
ವಿಸಿಕೆ ಶಾಸಕ ವನ್ನಿ ಅರಸು: “ಸರ್ಕಾರ ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೆ ತರಬೇಕು. ಇಂತಹ ನೇಮಕಾತಿಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತವೆ” ಎಂದು ವಿಧಾನಸಭೆಯಲ್ಲಿ ಆಕ್ರೋಶ ಹೊರಹಾಕಿದ್ದರು. ಡಿಎಂಡಿಕೆ ನಾಯಕಿ ಪ್ರೇಮಲತಾ ವಿಜಯಕಾಂತ್: “ಅವರು ನಿಮ್ಮ ವೈಯಕ್ತಿಕ ‘ರಾಜಗುರು’ ಆಗಿರಬಹುದು,ಆದರೆ ಉನ್ನತ ಸರ್ಕಾರಿ ಹುದ್ದೆ ನೀಡುವುದು ಸರಿಯಲ್ಲ.ಮತ ಹಾಕಿದ ಯುವಕರಿಗೆ ನೀವು ಏನು ಸಂದೇಶ ನೀಡುತ್ತಿದ್ದೀರಿ?” ಎಂದು ಸಿಎಂ ವಿಜಯ್ ಅವರನ್ನು ನೇರವಾಗಿ ಪ್ರಶ್ನಿಸಿದ್ದರು.
ಹೈಕೋರ್ಟ್ ಮೆಟ್ಟಿಲೇರಿದ್ದ ನೇಮಕಾತಿ
ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ತಿರುವಳ್ಳೂರು ಜಿಲ್ಲೆಯ ವಕೀಲೆ ಆರ್. ರತಿ ಅವರು ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಂವಿಧಾನದ ವಿಧಿ 309ರ ಅಡಿಯಲ್ಲಿ ಯಾವುದೇ ಸರ್ಕಾರಿ ನೇಮಕಾತಿ ನಡೆಯಬೇಕು, ಆದರೆ ಈ ನೇಮಕಾತಿಯು ಸಂವಿಧಾನಾತ್ಮಕ ವ್ಯವಸ್ಥೆಯ ವಿರುದ್ಧವಾಗಿ ನಡೆದಿದೆ ಎಂದು ಅವರು ವಾದಿಸಿದ್ದರು.ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವ್ಯಾಪಕ ಟೀಕೆ ಹಾಗೂ ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು, “ನಿರ್ಧಾರವನ್ನು ಮರುಪರಿಶೀಲಿಸುವುದಾಗಿ” ಭರವಸೆ ನೀಡಿದ್ದರು. ಅದರಂತೆ, ಇಂದು ಅಧಿಕೃತವಾಗಿ ನೇಮಕಾತಿ ಆದೇಶವನ್ನು ಹಿಂಪಡೆಯುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
#TamilNaduPolitics #CMVijay #JosephVijay #TVK #RickyRadhan #OSDAppointment #MadrasHighCourt #PoliticalNews #FreedomTV #ChennaiUpdates #DravidianPolitics




