
ಬಳ್ಳಾರಿ: ಪೆಟ್ರೋಲ್,ಡೀಸೆಲ್ ಮಿತ ಬಳಕೆ ಹಾಗೂ ಬಂಗಾರ ಖರೀದಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಮೇಲೆ ಇಲ್ಲಸಲ್ಲದ ನಿರ್ಬಂಧ ಹೇರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈಫಲ್ಯಗಳನ್ನು ಜನರ ಮೇಲೆ ಹೇರುತ್ತಿರುವ ಮೋದಿ
ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭರತ್ ರೆಡ್ಡಿ “ಮೋದಿಯವರು ಚುನಾವಣಾ ವೇಳೆ ಏನೆಲ್ಲಾ ಆಟ ಆಡಬೇಕೋ ಆಡ್ತಾರೆ. ಈಗ ಯುದ್ಧ ನಡೆಯುತ್ತಿದೆ ಎಂಬ ನೆಪ ಹೇಳಿ ಇಂಧನ ಮಿತವಾಗಿ ಬಳಸಿ, ವರ್ಕ್ ಫ್ರಮ್ ಹೋಮ್ ಮಾಡಿ ಎನ್ನುತ್ತಿದ್ದಾರೆ.ಜನರು ಅವರು ಹೇಳಿದ ಹಾಗೆ ಕೇಳಲು ದಡ್ಡರಲ್ಲ.ಇದು ಪ್ರಜಾಪ್ರಭುತ್ವವೇ ಹೊರತು ಸರ್ವಾಧಿಕಾರಿ ಪ್ರಭುತ್ವವಲ್ಲ. ಕೋವಿಡ್ ಸಮಯದಲ್ಲಿ ನಿರ್ಬಂಧ ಹೇರಿದಂತೆ ಈಗಲೂ ತಮ್ಮ ಆಡಳಿತಾತ್ಮಕ ವೈಫಲ್ಯಗಳನ್ನು ಜನರ ಮೇಲೆ ಹೇರುತ್ತಿದ್ದಾರೆ” ಎಂದು ಟೀಕಿಸಿದರು.
ಅಧಿಕಾರಕ್ಕೆ ಬರುವವರೆಗೂ ಮಾತ್ರ ಬಡವರ ಜಪ!
ಬಿಜೆಪಿಯ ಗಿಮಿಕ್ ರಾಜಕಾರಣದ ಬಗ್ಗೆ ಮಾತನಾಡಿದ ಅವರು, “ಪಶ್ಚಿಮ ಬಂಗಾಳ ಚುನಾವಣೆ ಮುಗಿದ ಕೂಡಲೇ ಮೋದಿ ಗ್ಯಾಸ್ ಬೆಲೆ ಏರಿಸಿದರು.ಪಂಚರಾಜ್ಯ ಚುನಾವಣೆಗೂ ಮೊದಲು ನಾನೆಂದೂ ಬಡವರ ಪರ ಎನ್ನುತ್ತಿದ್ದ ವಿಶ್ವಗುರು ಮೋದಿ, ಚುನಾವಣಾ ಫಲಿತಾಂಶ ಬಂದ ಕೂಡಲೆ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ.ಮುಗ್ಧ ಜನರು ಇವರನ್ನು ನಂಬಿ ಓಟು ಹಾಕಿದ್ದಾರೆ. ಆದರೆ ಮೋದಿ ರಾಜತಾಂತ್ರಿಕತೆಯಲ್ಲಿ ಸಂಪೂರ್ಣ ವಿಫಲರಾಗಿದ್ದು” ಜನರನ್ನು ವಂಚಿಸುತ್ತಿದ್ದಾರೆ ಎಂದು ಗುಡುಗಿದರು.
2024ರ ಚುನಾವಣೆಯಲ್ಲಿ ಜನ ಮೋದಿಯವರಿಗೆ ಪೂರ್ಣ ಬಹುಮತ ನೀಡಿಲ್ಲ.ಬಿಜೆಪಿ ಟಿಡಿಪಿ ಮತ್ತು ಜೆಡಿಯು ಬೆಂಬಲದಿಂದ ಸರ್ಕಾರ ನಡೆಸುತ್ತಿದೆ.ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಇಂತಹ “ಮಿತ ಬಳಕೆ”ಯ ಸುಳ್ಳು ನೆಪಗಳನ್ನು ಹೇಳುವುದನ್ನು ಬಿಟ್ಟು, ಜನಸಾಮಾನ್ಯರ ಬವಣೆಯನ್ನು ನೀಗಿಸುವತ್ತ ಪ್ರಧಾನಿ ಗಮನ ಹರಿಸಲಿ ಎಂದು ಭರತ್ ರೆಡ್ಡಿ ಆಗ್ರಹಿಸಿದ್ದಾರೆ. ಮುಂಬರುವ 2029ರ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುವುದು ಖಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ.
#NaraBharatReddy #PMModi #PetrolPriceHike #CongressVsBJP #BallariNews #KarnatakaPolitics #FuelCrisis #FreedomTV #BreakingNews #DemocraticRights #EconomicFailure




