
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ‘ಕರ್ಣ’ ಧಾರಾವಾಹಿಯ ಸುಂದರಿ ಭವ್ಯಾ ಗೌಡ ಅವರು ತಮ್ಮ ತಾಯಿ ಮಂಜುಳ ಅವರ ಹುಟ್ಟುಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಿದ್ದಾರೆ. ಅಮ್ಮನ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಭವ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ತಾಯಿಯ ಜೊತೆಗಿನ ಸುಂದರ ಕ್ಷಣಗಳ ಫೋಟೊಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಹೃದಯಸ್ಪರ್ಶಿ ಪತ್ರವೊಂದನ್ನು ಬರೆಯುವ ಮೂಲಕ ತಮ್ಮ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ತಂದೆ-ತಾಯಿ ಮತ್ತು ಅಕ್ಕತಂಗಿಯರ ಜೊತೆಗಿನ ಕೌಟುಂಬಿಕ ಫೋಟೊಗಳನ್ನು ಹಂಚಿಕೊಂಡಿರುವ ನಟಿ, ಅಮ್ಮನೇ ತಮ್ಮ ಜೀವನದ ಶಕ್ತಿ ಎಂಬುವುದನ್ನು ಮನವರಿಕೆ ಮಾಡಿದ್ದಾರೆ.

ಭವ್ಯಾ ಗೌಡ ಅವರು ಬರೆದಿರುವ ಭಾವನಾತ್ಮಕ ಪತ್ರದಲ್ಲಿ ಅಮ್ಮನ ಮೇಲಿರುವ ಅತೀವ ಗೌರವ ಎದ್ದು ಕಾಣುತ್ತಿದೆ. “ಅಮ್ಮಾ, ನೀನು ಮಾತಿನಲ್ಲಿ ಹೇಳುವ ಪ್ರೀತಿ ಮಾತ್ರವಲ್ಲ, ಪ್ರತಿಯೊಂದು ಸಣ್ಣ ಕೆಲಸದಲ್ಲೂ ನಿನ್ನ ಮಮತೆ ಎದ್ದು ಕಾಣುತ್ತದೆ. ನಾನು ಕೇಳುವ ಮೊದಲೇ ನನ್ನ ಅಗತ್ಯಗಳನ್ನು ನೀನು ಅರಿಯುವೆ, ಅದೇ ನಿನ್ನ ವಿಶೇಷತೆ” ಎಂದು ಬರೆದಿದ್ದಾರೆ. ಅಲ್ಲದೆ, “ನಾನು ಧೈರ್ಯವಾಗಿರಲು ಮತ್ತು ಜೀವನದಲ್ಲಿ ಮುಂದೆ ಸಾಗಲು ನೀನೇ ಕಾರಣ. ನೀನು ನನ್ನ ಬೆನ್ನಿಗೆ ನಿಂತಿದ್ದರೆ ನನಗೆ ಯಾವುದೇ ಭಯವಿರುವುದಿಲ್ಲ. ನಿನ್ನ ಪ್ರೀತಿಗಿಂತ ಪವಿತ್ರವಾದುದು ಯಾವುದೂ ಇಲ್ಲ, ನೀನಿಲ್ಲದೆ ನನ್ನ ಜೀವನವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ” ಎಂದು ಭವ್ಯಾ ಭಾವುಕರಾಗಿ ನುಡಿದಿದ್ದಾರೆ.

ನಟಿ ಭವ್ಯಾ ಗೌಡ ಅವರ ವೃತ್ತಿಜೀವನದ ಪಯಣ ಕೂಡ ಅಷ್ಟೇ ರೋಚಕವಾಗಿದೆ. ‘ಗೀತಾ’ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅವರು, ಮೊದಲ ಸೀರಿಯಲ್‌ನಲ್ಲೇ ಮನೆಮಾತಾದರು. ತದನಂತರ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿ ಗಮನ ಸೆಳೆದ ಭವ್ಯಾ, ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣವೇ ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ‘ನಿಧಿ’ ಅಲಿಯಾಸ್ ‘ಆಲಿಯಾ’ ಪಾತ್ರದ ಮೂಲಕ ಮಗದೊಮ್ಮೆ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸದ್ಯ ಅಮ್ಮನ ಮೇಲಿನ ಅವರ ಈ ಅಪಾರ ಪ್ರೀತಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.




