
ಹಾಸನ: ಅರಸೀಕೆರೆ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ 18 ವರ್ಷದ ಯುವತಿ ಮೋನಿಕಾ, ರಸ್ತೆ ಅಪಘಾತದಲ್ಲಿ ಬ್ರೈನ್ ಡೆಡ್ ಆದ ನಂತರವೂ ತಮ್ಮ ಅಂಗಾಂಗ ದಾನದ ಮೂಲಕ ಐದು ಜನರಿಗೆ ಮರುಜೀವ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ್ದ ಮೋನಿಕಾ, ಏಪ್ರಿಲ್ 5ರಂದು ಸಂಜೆ ಅರಸೀಕೆರೆಯ ಬಿ.ಹೆಚ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯಗೊಂಡಿತ್ತು (ಬ್ರೈನ್ ಡೆಡ್). ಈ ದುರದೃಷ್ಟಕರ ಸಂಗತಿಯನ್ನು ವೈದ್ಯರು ತಿಳಿಸಿದಾಗ, ತೀವ್ರ ಶೋಕದ ನಡುವೆಯೂ ಯುವತಿಯ ಪೋಷಕರು ಮಾನವೀಯತೆ ಮೆರೆದು ಮಗಳ ಅಂಗಾಂಗಗಳನ್ನು ದಾನ ಮಾಡಲು ಧೈರ್ಯದ ನಿರ್ಧಾರ ಕೈಗೊಂಡರು. ನೂರಾರು ಕನಸು ಹೊತ್ತಿದ್ದ ಯುವತಿಯ ಬದುಕು ವಿಧಿಯ ಆಟದಿಂದ ಅರ್ಧಕ್ಕೆ ನಿಂತರೂ, ಆಕೆಯ ಅಂಗಾಂಗಗಳು ಐದು ಜನರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿವೆ. ತನ್ನ ಸಾವಿನ ಮೂಲಕವೇ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ ಮೋನಿಕಾ, ಈಗ ಅನೇಕರ ಪಾಲಿಗೆ ಸ್ಫೂರ್ತಿಯಾಗಿದ್ದಾರೆ.




