
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂಬುವವರೇ ಗಾಯಗೊಂಡ ದುರ್ದೈವಿಯಾಗಿದ್ದು, ಇವರು ತಮ್ಮ ಮಗಳು ದೀಪಶ್ರೀ ಅವರೊಂದಿಗೆ ಗುಳಿಗಜ್ಜ ಕಟ್ಟೆಗೆ ಕಾಣಿಕೆ ಅರ್ಪಿಸಲು ಬಂದಿದ್ದಾಗ ಈ ಘಟನೆ ನಡೆದಿದೆ. ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಿ ರಸ್ತೆಯ ಅಂಚಿಗೆ ತಲುಪುತ್ತಿದ್ದ ವೇಳೆ ಮೆಲ್ಕಾರ್ ಕಡೆಯಿಂದ ಅತೀ ವೇಗವಾಗಿ ಬಂದ ಕಾರು ಇವರಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಭಾರತಿ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




