mangaloreರಾಜಕೀಯ

ವಿಧಾನಮಂಡಲ ಸಂಪೂರ್ಣ ಡಿಜಿಟಲ್! ಹೈಟೆಕ್ ಯೋಜನೆ ಪ್ರಕಟಿಸಿದ ಯು.ಟಿ. ಖಾದರ್

Vidhanasabha will be fully digital said U.T.Khader

ಮಂಗಳೂರು: ಕರ್ನಾಟಕ ವಿಧಾನಸಭಾ ಹಾಗೂ ವಿಧಾನ ಪರಿಷತ್ ಕಲಾಪಗಳನ್ನು ಸಂಪೂರ್ಣವಾಗಿ ಕಾಗದ ರಹಿತ (ಪೇಪರ್‌ಲೆಸ್) ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಷನ್’ (NeVA) ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಉಭಯ ಸದನಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಂಗಳೂರಿನಲ್ಲಿ ಪ್ರಕಟಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ವಿವರವಾದ ಯೋಜನೆ ವರದಿ (DPR) ಸಿದ್ಧವಾಗುತ್ತಿದೆ ಎಂದರು. ಒಟ್ಟಾರೆಯಾಗಿ 130 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ತಂತ್ರಜ್ಞಾನ ಅಳವಡಿಕೆಯ ಬಳಿಕ ಎಲ್ಲಾ ಶಾಸಕರಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಕುಳಿತ ಜಾಗದಲ್ಲೇ ಡಿಜಿಟಲ್ ಹಾಜರಾತಿ & ಹೈಟೆಕ್ ‘ಕಿಯಾಸ್ಕ್’


ವಿಧಾನಮಂಡಲದ ಐಟಿ ವಿಭಾಗದ ಮೂಲಕ ಶಾಸಕರ ಹಾಜರಾತಿ ವ್ಯವಸ್ಥೆಯನ್ನೂ ನವೀಕರಿಸಲಾಗುತ್ತಿದ್ದು, ಶಾಸಕರು ಸದನದಲ್ಲಿ ತಮ್ಮ ತಮ್ಮ ಕುರ್ಚಿಗಳಲ್ಲಿ ಕುಳಿತುಕೊಂಡೇ ಡಿಜಿಟಲ್ ವ್ಯವಸ್ಥೆ ಮೂಲಕ ಹಾಜರಾತಿ ದಾಖಲಿಸಬಹುದಾಗಿದೆ. ಜೊತೆಗೆ, ಸಾರ್ವಜನಿಕರ ನೆರವಿಗಾಗಿ ವಿಧಾನಸೌಧದ ಪ್ರತಿ ಮಹಡಿಯಲ್ಲೂ ಅತ್ಯಾಧುನಿಕ ‘ಕಿಯಾಸ್ಕ್’ (ಮಾಹಿತಿ ಪರದೆ) ಅಳವಡಿಸಲಾಗುವುದು. ಯಾವ ಕೊಠಡಿಯಲ್ಲಿ ಯಾವ ಸಚಿವರು ಲಭ್ಯವಿದ್ದಾರೆ ಎಂಬ ನಿಖರ ಮಾಹಿತಿ ಇದರಿಂದ ಸಾರ್ವಜನಿಕರಿಗೆ ಸಿಗಲಿದೆ.

“ಸ್ಪೀಕರ್ ಆದರೆ ಮೇಲೆ, ಮಂತ್ರಿಯಾದರೆ ಕೆಳಗೆ ಇರುತ್ತೇನೆ!” – ಖಾದರ್ ಮಾರ್ಮಿಕ ಉತ್ತರ
ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನರಚನೆ ಹಾಗೂ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದ ಕುರಿತಾದ ಊಹಾಪೋಹಗಳ ಬೆನ್ನಲ್ಲೇ, ಯು.ಟಿ. ಖಾದರ್ ತಮ್ಮ ಭವಿಷ್ಯದ ರಾಜಕೀಯ ನಡೆ ಬಗ್ಗೆ ಚಮತ್ಕಾರವಾಗಿ ಮಾತನಾಡಿದ್ದಾರೆ. “ಮುಂದಿನ ಸಿಎಂ ಪ್ರಮಾಣ ವಚನ ಸಂದರ್ಭದಲ್ಲಿ ನಾನು ವೇದಿಕೆಯ ಮೇಲೆ ಇರುತ್ತೇನಾ ಅಥವಾ ಕೆಳಗೆ ಇರುತ್ತೇನಾ ಎನ್ನುವುದು ನನಗೆ ಗೊತ್ತಿಲ್ಲ. ಒಂದು ವೇಳೆ ಸ್ಪೀಕರ್ ಆಗಿ ಮುಂದುವರಿದರೆ ಶಿಷ್ಟಾಚಾರದ ಪ್ರಕಾರ ವೇದಿಕೆಯ ಮೇಲೆ ಇರುತ್ತೇನೆ. ಸಚಿವ ಸ್ಥಾನ ಸಿಗುವುದಾದರೆ ಕೆಳಗೆ ಮುಂದಿನ ಸಾಲಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಇರುತ್ತೇನೆ. ಕೇವಲ ಶಾಸಕನಾಗಿದ್ದರೆ ಪ್ರೋಟೋಕಾಲ್ ಎಲ್ಲಿದೆಯೋ ಅಲ್ಲಿರುತ್ತೇನೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಕಳೆದ ಬಾರಿ ಸರ್ಕಾರ ರಚನೆಯಾಗುವಾಗಲೂ ಸಚಿವ ಸ್ಥಾನದ ಮುಂಚೂಣಿಯಲ್ಲಿದ್ದ ತಮಗೆ ಹೈಕಮಾಂಡ್ ಸ್ಪೀಕರ್ ಜವಾಬ್ದಾರಿ ನೀಡಿತ್ತು ಎಂದು ನೆನಪಿಸಿಕೊಂಡ ಖಾದರ್, ತಾವು ಸ್ಪೀಕರ್ ಆಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ ಎಂದರು. ಈ ಬಾರಿಯೂ ಹೈಕಮಾಂಡ್ ಮತ್ತು ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಮಾಡಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ತಮಗೆ ಸಚಿವ ಸ್ಥಾನದ ಆಕಾಂಕ್ಷೆ ಇರುವುದನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.

#UTKhader #KarnatakaAssembly #eVidhan #NeVA #DigitalKarnataka #PaperlessAssembly #VidhanaSoudha #SuvarnaSoudha #KarnatakaPolitics #CabinetReshuffle #FreedomTVKannada #BreakingNews #Mangaluru

Comments (0)

Your email address will not be published. Required fields are marked *

Back to top button