DAVANAGEREಸುದ್ದಿ

ಬಸ್ ಭೀಕರ ಅಪಘಾತ: ನಿಯಂತ್ರಣ ತಪ್ಪಿ ನೀರಿಗೆ ಉರುಳಿದ ವಾಹನ

ಶಿವಮೊಗ್ಗ: ದಾವಣಗೆರೆಯಿಂದ ಭದ್ರಾವತಿಗೆ ಸಂಚರಿಸುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಾಗೇಹಳ್ಳದ ಬಳಿ ಸೇತುವೆಯಿಂದ ಹಳ್ಳಕ್ಕೆ ಬಿದ್ದಿರುವ ಭೀಕರ ಅಪಘಾತ ಸಂಭವಿಸಿದೆ. ಸುಮಾರು 12:30ರ ವೇಳೆಗೆ ನಡೆದ ಈ ಘಟನೆಯಲ್ಲಿ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಒಟ್ಟು 35 ಪ್ರಯಾಣಿಕರು ಬಸ್ಸಿನಲ್ಲಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ಮೂವರು ಪ್ರಯಾಣಿಕರ ಕೈಕಾಲುಗಳು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಕೂಡಲೇ ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯೇ ಈ ಅವಘಡಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಹಳ್ಳಕ್ಕೆ ಬಿದ್ದ ಬಸ್ಸನ್ನು ಮೇಲೆತ್ತಲು ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button