ಕ್ರಿಕೆಟ್ರಾಜ್ಯಸುದ್ದಿ

ನಮ್ಮ ಆರ್‌ಸಿಬಿ ತಂಡಕ್ಕೆ ಈಗ ಹೆಮ್ಮೆಯ ನಂದಿನಿ ಬಲ ಕೆಎಂಎಫ್ ಹೊಸ ಒಪ್ಪಂದ

ಬೆಂಗಳೂರು: ಐಪಿಎಲ್ ಹಬ್ಬ ಶುರುವಾಗಲು ದಿನಗಣನೆ ಬಾಕಿ ಇರುವಾಗಲೇ ಕನ್ನಡಿಗರಿಗೆ ಮತ್ತು ಆ‌ರ್.ಸಿ.ಬಿ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಸಿಕ್ಕಿದೆ. ಕರ್ನಾಟಕದ ಹೆಮ್ಮೆಯ ಸಂಸ್ಥೆಯಾದ ‘ಕರ್ನಾಟಕ ಹಾಲು ಮಹಾಮಂಡಳಿ’ (KMF) ತನ್ನ ಜನಪ್ರಿಯ ಬ್ಯಾಂಡ್ ‘ನಂದಿನಿ’ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಆ‌ರ್.ಸಿ.ಬಿ ತಂಡಕ್ಕೆ ಅಧಿಕೃತ ಡೈರಿ ಪಾರ್ಟ್ನರ್ ಆಗಿ ಸಾಥ್ ನೀಡಲಿದೆ.

ಕಳೆದ ಕೆಲವು ವರ್ಷಗಳಿಂದ ನಂದಿನಿ ಬ್ಯಾಂಡ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗ ಸ್ಥಳೀಯವಾಗಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್.ಸಿ.ಬಿ ತಂಡದ ಕೈಜೋಡಿಸುವ ಮೂಲಕ ಕನ್ನಡಿಗರ ಮನ ಗೆಲ್ಲಲು ಮುಂದಾಗಿದೆ. ಈ ಒಪ್ಪಂದದ ಪ್ರಕಾರ, ಪಂದ್ಯಾವಳಿಯ ಸಮಯದಲ್ಲಿ ಆರ್.ಸಿ.ಬಿ ಆಟಗಾರರ ಜೆರ್ಸಿಯ ಮೇಲೆ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ ಅಥವಾ ತಂಡದ ಪ್ರಚಾರ ಕಾರ್ಯಗಳಲ್ಲಿ ನಂದಿನಿ ಹೆಸರು ಪ್ರಮುಖವಾಗಿ ಇರಲಿದೆ.
“ನಮ್ಮೂರಿನ ತಂಡಕ್ಕೆ ನಮ್ಮದೇ ಹಾಲಿನ ಬ್ಯಾಂಡ್ ಬೆಂಬಲ ನೀಡುತ್ತಿರುವುದು ಹೆಮ್ಮೆಯ ವಿಷಯ” ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಈ ಹಿಂದೆ ನಂದಿನಿ ಸಂಸ್ಥೆಯು ವಿದೇಶಿ ಕ್ರಿಕೆಟ್ ತಂಡಗಳಿಗೂ (ಐರ್ಲೆಂಡ್, ಸ್ಕಾಟ್ಲಂಡ್ ಪ್ರಾಯೋಜಕತ್ವ ನೀಡಿ ಗಮನ ಸೆಳೆದಿತ್ತು. ಈಗ ತನ್ನದೇ ರಾಜ್ಯದ ತಂಡಕ್ಕೆ ಬೆಂಬಲ ನೀಡುತ್ತಿರುವುದು ವಿಶೇಷವಾಗಿದೆ.


ಆ‌ರ್.ಸಿ.ಬಿ ತಂಡವು ‘ಈ ಸಲ ಕಪ್ ನಮ್ಮೆ’ ಎನ್ನುವ ಭರವಸೆಯಲ್ಲಿದೆ. ಇತ್ತ ನಂದಿನಿ ಕೂಡ ಗುಣಮಟ್ಟದ ಹಾಲಿನ ಉತ್ಪನ್ನಗಳ ಮೂಲಕ ಮನೆಮಾತಾಗಿದೆ. ಈ ಎರಡು ಬ್ಯಾಂಡ್‌ಗಳ ಸಮ್ಮಿಲನವು ಕ್ರೀಡೆ ಮತ್ತು ಸ್ಥಳೀಯ ಉದ್ಯಮದ ಬೆಳವಣಿಗೆಗೆ ಹೊಸ ವೇದಿಕೆ ಒದಗಿಸಲಿದೆ. ಒಟ್ಟಿನಲ್ಲಿ, ಈ ಬಾರಿ ಮೈದಾನದಲ್ಲಿ ಆರ್.ಸಿ.ಬಿ ಆಟಗಾರರು ಮಿಂಚುವುದನ್ನು ನೋಡಲು ಮತ್ತು ನಮ್ಮ ಹೆಮ್ಮೆಯ ನಂದಿನಿ ಲೋಗೋವನ್ನು ಅವರ ಜೆರ್ಸಿಯ ಮೇಲೆ ಕಾಣಲು ಕನ್ನಡಿಗರು ಕಾತರರಾಗಿದ್ದಾರೆ.

Comments (0)

Your email address will not be published. Required fields are marked *

Back to top button