keralaರಾಜ್ಯ

ವೈದ್ಯೆ ವಂದನಾ ಹತ್ಯೆ ಕೇಸ್; ಅಪರಾಧಿ ಸಂದೀಪ್‌ಗೆ 30 ವರ್ಷ ಜೈಲು!

ಕೇರಳ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಯುವ ವೈದ್ಯೆ ವಂದನಾ ದಾಸ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧಿ ಜಿ. ಸಂದೀಪ್‌ಗೆ ಕೊಲ್ಲಂ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಯುವ ವೈದ್ಯೆ ವಂದನಾ ದಾಸ್ ಕೊಲೆ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಅಪರಾಧಿ ಜಿ. ಸಂದೀಪ್‌ಗೆ ಕೊಲ್ಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅಪರಾಧಿಗೆ ಮೊದಲು 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದ್ದು, ಈ ಅವಧಿ ಮುಗಿದ ಬಳಿಕ ಆತನ ಜೀವಾವಧಿ ಶಿಕ್ಷೆ ಆರಂಭವಾಗಲಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

2023ರ ಮೇ 10ರಂದು ನಡೆದ ಈ ಕೃತ್ಯವು ಅತ್ಯಂತ ಭೀಕರವಾಗಿತ್ತು. ಶಾಲಾ ಶಿಕ್ಷಕನಾಗಿದ್ದ ಸಂದೀಪ್‌ನನ್ನು ಪೊಲೀಸರು ಕಾಲಿನ ಗಾಯಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ತನಗೆ ಬ್ಯಾಂಡೇಜ್ ಹಾಕುತ್ತಿದ್ದ ವೈದ್ಯೆ ವಂದನಾ ಅವರ ಮೇಲೆ ಶಸ್ತ್ರಚಿಕಿತ್ಸಾ ಕತ್ತರಿಯಿಂದ ಏಕಾಏಕಿ ದಾಳಿ ಮಾಡಿದ್ದ ಸಂದೀಪ್, ಬರೋಬ್ಬರಿ 27 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ತರಬೇತಿಯ ಭಾಗವಾಗಿ ಕೊಟ್ಟಾರಕ್ಕರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕೊಟ್ಟಾಯಂ ಮೂಲದ ವಂದನಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತಾಪ್ ಜಿ. ಪಡಿಕ್ಕಲ್ ಅವರು ಅಪರಾಧಿಗೆ ಮರಣದಂಡನೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಆದರೆ, ನ್ಯಾಯಾಲಯವು ಇದನ್ನು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಪರಿಗಣಿಸದ ಕಾರಣ ಗಲ್ಲು ಶಿಕ್ಷೆ ನೀಡಿಲ್ಲ. ಇದರಿಂದ ಅಸಮಾಧಾನಗೊಂಡಿರುವ ವಂದನಾ ಅವರ ಕುಟುಂಬಸ್ಥರು, “ನನ್ನ ಮಗಳಿಗೆ 27 ಬಾರಿ ಇರಿದು ಕೊಂದವನಿಗೆ ಮರಣದಂಡನೆಯೇ ಆಗಬೇಕಿತ್ತು” ಎಂದು ಕಣ್ಣೀರು ಹಾಕಿದ್ದಾರೆ. ಪ್ರಾಸಿಕ್ಯೂಟರ್ ಕೂಡ ಈ ಶಿಕ್ಷೆಯನ್ನು ಮರಣದಂಡನೆಗೆ ಹೆಚ್ಚಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button