ದೇಶ/ವಿದೇಶರಾಜ್ಯಸುದ್ದಿ

ಕೊಲ್ಲಿ ಯುದ್ಧದ ನಡುವೆ ಭಾರತಕ್ಕೆ ಎಲ್‌ಪಿಜಿ ತಂದು ತಲುಪಿದ ಶಿವಾಲಿಕ್ ಹಡಗು

ಅಹಮದಾಬಾದ್‌: ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಭಾರತಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸುಮಾರು 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಹಡಗು ಗುಜರಾತ್‌ನ ಮುಂದ್ರಾ ಬಂದರಿಗೆ ತಲುಪಿದೆ.

ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಒಟ್ಟು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ನಂದಾ ದೇವಿ’ ಮತ್ತು ‘ಶಿವಾಲಿಕ್’ ಎಂಬ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಆಗಮಿಸುತ್ತಿವೆ. ಅದರಂತೆ ಮಾರ್ಚ್ 16 ರಂದು ಶಿವಾಲಿಕ್ ಹಡಗು ಭಾರತ ತಲುಪಿದ್ದು, ಮತ್ತೊಂದು ಹಡಗು ‘ನಂದಾ ದೇವಿ’ ಮಾರ್ಚ್ 17 ರಂದು ಕಾಂಡ್ಲಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ.

ಇತ್ತೀಚೆಗೆ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆಯಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹಲವಾರು ವಲಯಗಳು ಸಂಕಷ್ಟ ಎದುರಿಸುತ್ತಿವೆ. ರೆಸ್ಟೋರೆಂಟ್‌ಗಳು, ಹಾಸ್ಟೆಲ್‌ಗಳು, ಕಂಪನಿಗಳು ಹಾಗೂ ಮನೆಗಳು ಮತ್ತು ಹೋಟೆಲ್‌ಗಳಲ್ಲಿ ಗ್ಯಾಸ್ ಕೊರತೆಯಿಂದ ಸಮಸ್ಯೆಗಳು ಹೆಚ್ಚಾಗಿವೆ. ಎಲ್‌ಪಿಜಿ ಸರಬರಾಜು ಇನ್ನಷ್ಟು ವಿಳಂಬವಾದರೆ ಹಲವು ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಮಧ್ಯೆ ಶಿವಾಲಿಕ್ ಹಡಗು ಭಾರತ ತಲುಪಿರುವುದು ಕೆಲ ಮಟ್ಟಿಗೆ ಗ್ಯಾಸ್ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆ ಮೂಡಿಸಿದೆ. ಮತ್ತೊಂದು ಹಡಗು ನಂದಾ ದೇವಿ ನಾಳೆ ಕಾಂಡ್ಲಾ ಬಂದರಿಗೆ ತಲುಪಲಿದ್ದು, ಇದರಿಂದ ಎಲ್‌ಪಿಜಿ ಪೂರೈಕೆ ಇನ್ನಷ್ಟು ಸುಧಾರಿಸುವ ಸಾಧ್ಯತೆ ಇದೆ.

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಇರಾನಿನ ವಿದೇಶಾಂಗ ಸಚಿವರ ನಡುವಿನ ಚರ್ಚೆಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಮಾತುಕತೆಯ ನಂತರ ಭಾರತೀಯ ಹಡಗುಗಳಿಗೆ ಹಾರ್ಮುಜ್ ಮಾರ್ಗವನ್ನು ಸುರಕ್ಷಿತವಾಗಿ ದಾಟಲು ಅನುಮತಿ ದೊರೆತಿದ್ದು, ಅದರ ಫಲವಾಗಿ ಈ ಹಡಗುಗಳು ಭಾರತಕ್ಕೆ ಆಗಮಿಸಿವೆ.

Comments (0)

Your email address will not be published. Required fields are marked *

Back to top button