
ಬೆಂಗಳೂರು: ವರ್ತೂರಿನಲ್ಲಿ ವಿವಾಹಿತ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಗೆಳತಿಯನ್ನು ವೈಯರ್ನಿಂದ ಕತ್ತು ಬಿಗಿದು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಡಗು ಮೂಲದ 23 ವರ್ಷದ ರಂಜಿತಾ ಕೊಲೆಯಾದ ದುರ್ದೈವಿ. ಆರೋಪಿ ಅಯ್ಯಪ್ಪ ಎಂಬಾತನೊಂದಿಗೆ ಈಕೆ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಅಯ್ಯಪ್ಪನಿಗೆ ಮೊದಲೇ ಮದುವೆಯಾಗಿದ್ದ ವಿಷಯ ರಂಜಿತಾಳಿಗೆ ತಿಳಿದಿರಲಿಲ್ಲ ಎನ್ನಲಾಗಿದ್ದು, ಇತ್ತೀಚೆಗೆ ಈ ರಹಸ್ಯ ಬಯಲಾದಾಗ ಇಬ್ಬರ ನಡುವೆ ತೀವ್ರ ಜಗಳ ನಡೆಯುತ್ತಿತ್ತು.
ಮದುವೆಯ ವಿಚಾರವಾಗಿ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದ ಸಂದರ್ಭದಲ್ಲಿ, ಆಕ್ರೋಶಗೊಂಡ ಅಯ್ಯಪ್ಪ ಎಲೆಕ್ಟ್ರಿಕ್ ವೈಯರ್ ಬಳಸಿ ರಂಜಿತಾಳ ಕತ್ತು ಬಿಗಿದು ಪ್ರಾಣ ತೆಗೆದಿದ್ದಾನೆ. ತಾನು ಮದುವೆಯಾದ ವಿಷಯವನ್ನು ಮುಚ್ಚಿಟ್ಟು ಯುವತಿಯನ್ನು ನಂಬಿಸಿದ್ದ ಆರೋಪಿಯ ಕೃತ್ಯ ಈಗ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅಯ್ಯಪ್ಪನನ್ನು ಬಂಧಿಸಿದ್ದಾರೆ.
ಪೊಲೀಸರು ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಹಿಂದಿನ ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದಾರೆ.




