
ಬೆಂಗಳೂರು: ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಕಾನೂನುಬಾಹಿರವಾಗಿ ಹುದ್ದೆ ಸೃಷ್ಟಿಸಿ, ಅರ್ಹ ಅಧಿಕಾರಿಗೆ ಅನ್ಯಾಯ ಮಾಡಿದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅರ್ಹ ಅಧಿಕಾರಿಯೊಬ್ಬರಿಗೆ ಸಿಗಬೇಕಾದ ಸ್ಥಾನವನ್ನು ತಪ್ಪಿಸಲು ಸರ್ಕಾರ ನಡೆಸಿದ ಈ ಕಸರತ್ತನ್ನು ಹೈಕೋರ್ಟ್ ರದ್ದುಗೊಳಿಸಿದ್ದು ಮಾತ್ರವಲ್ಲದೆ, ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದಂಡವನ್ನೂ ವಿಧಿಸಿದೆ.
ವಿಜಯ್ ಕುಮಾರ್ ಚವದಣ್ಣವರ್ ಎಂಬ ಹಿರಿಯ ಅಧಿಕಾರಿಗೆ ಅವರ ಅರ್ಹತೆಯಂತೆ ಮುಖ್ಯ ಇಂಜಿನಿಯರ್ ಹುದ್ದೆ ನೀಡದೆ ಸರ್ಕಾರ ಸತಾಯಿಸಿತ್ತು. ಇಲಾಖೆಯ ನಿಯಮಾವಳಿಗಳಲ್ಲಿ ಇಲ್ಲದಿದ್ದರೂ ‘ಇಂಜಿನಿಯರ್ ಇನ್ ಚೀಫ್’ ಎಂಬ ಹೊಸ ಹುದ್ದೆಯನ್ನು ತಾತ್ಕಾಲಿಕವಾಗಿ ಸೃಷ್ಟಿಸಿ, ಆ ಜಾಗಕ್ಕೆ ಬೇರೊಬ್ಬರನ್ನು ನೇಮಿಸಲಾಗಿತ್ತು. ಇದರಿಂದಾಗಿ ನಿವೃತ್ತಿಯ ಅಂಚಿನಲ್ಲಿದ್ದ ವಿಜಯ್ ಕುಮಾರ್ ಅವರು ಯಾವುದೇ ಅಧಿಕೃತ ಹುದ್ದೆ ಇಲ್ಲದೆ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿತ್ತು. ಸರ್ಕಾರದ ಈ ವಿಲಕ್ಷಣ ನಡೆಯನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಟಿ. ವೆಂಕಟೇಶ್ ನಾಯ್ಕ ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದೆ. 2021ರ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಅಸ್ತಿತ್ವದಲ್ಲೇ ಇಲ್ಲದ ಹುದ್ದೆಯನ್ನು ಸೃಷ್ಟಿಸಿರುವುದು ಅಧಿಕಾರದ ಸ್ಪಷ್ಟ ದುರುಪಯೋಗ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೇವಲ ಒಬ್ಬ ವ್ಯಕ್ತಿಯ ಹಿತಾಸಕ್ತಿ ಕಾಪಾಡಲು ಇಡೀ ವ್ಯವಸ್ಥೆಯನ್ನು ಬಳಸಿಕೊಂಡಿರುವುದು ಕಾನೂನುಬಾಹಿರ ಎಂದು ಪೀಠವು ಗುಡುಗಿದೆ.
ನ್ಯಾಯಾಲಯವು ಸರ್ಕಾರದ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸಿದ್ದು, ವಿಜಯ್ ಕುಮಾರ್ ಅವರಿಗೆ ಅವರ ಅರ್ಹತೆಗೆ ತಕ್ಕಂತೆ ಹುದ್ದೆ ನೀಡಲು ಆದೇಶಿಸಿದೆ. ಅಷ್ಟೇ ಅಲ್ಲದೆ, ಅರ್ಹ ಅಧಿಕಾರಿಯನ್ನು ಅನಗತ್ಯವಾಗಿ ಅಲೆದಾಡಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. x




