ಜಿಲ್ಲೆಶಿಕ್ಷಣ

ಪಿಎಸ್ಐ ನೇಮಕಾತಿ ಮರು ಪರೀಕ್ಷೆ: ಹೇಗಿತ್ತು ರೂಲ್ಸು..? ಶೂ ಹಾಕುವಂತಿಲ್ಲ..ತುಂಬು ತೋಳು ಧರಿಸುವಂತಿರಲಿಲ್ಲ!

ಬೆಂಗಳೂರು :  ಇಂದು 545 ಪಿಎಸ್ಐ ನೇಮಕಾತಿಗೆ ಮರುಪರೀಕ್ಷೆ ನಡೆಯುತ್ತಿದ್ದು, ಅಭ್ಯರ್ಥಿಗಳಿಗೆ ಖಡಕ್ ಮಾರ್ಗಸೂಚಿ ನೀಡಲಾಗಿತ್ತು.. ಅದ್ರಲ್ಲೂ ಅಭ್ಯರ್ಥಿಗಳು ವಸ್ತ್ರ ಸಂಹಿತೆಯಲ್ಲಿನ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿತ್ತು. ಒಂದು ವೇಳೆ ನಿಯಮ ಮೀರಿದರೆ ಪರೀಕ್ಷೆ ಬರೆಯುವಂತಿಲ್ಲ. ಇನ್ನು ತುಂಬು ತೋಳು ಧರಿಸಿಕೊಂಡು ಬಂದಿದ್ದವರ ಶರ್ಟ್ ಗಳನ್ನೇ ಕತ್ತರಿಸಿ ನಂತ್ರ ಪರೀಕ್ಷಾ ಕೊಠಡಿಗೆ ಕಳಿಸಿಕೊಡಲಾಯ್ತು. ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ನಿಷೇಧಿಸಲಾಗಿತ್ತು.

ಶರ್ಟ್ ಅಥವಾ ಪ್ಯಾಂಟ್‌ಗಳಿಗೆ ಜಿಪ್ ಪ್ಯಾಕೆಟ್‌ಗಳು, ದೊಡ್ಡ ದೊಡ್ಡ ಗುಂಡಿಗಳು, ಎಕ್ಸ್ಟ್ರಾ ಡಿಸೈನ್ ಇರುವಂತಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಹಾಲ್‌ಗೆ ಶೂ ಹಾಕಿಕೊಂಡು ಹೋಗುವಂತಿಲ್ಲ. ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚಿಸಲಾಗಿದೆ. ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸಲು ನಿಷೇಧವಿತ್ತು. ಕೈ ಖಡಗ ಹಾಕಿಕೊಂಡು ಬಂದವರಿಗೆ ಸೋಪು ನೀರು ನೀಡಿ ಬಿಚ್ಚಿಸಲಾಯ್ತು. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್ ಇರುವಂತಿರಲಿಲ್ಲ. ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರ ಹಾಲ್‌ಗೆ ಪ್ರವೇಶ ನಿಷೇಧವಿತ್ತು.

ಯಾವುದೇ ರೀತಿಯಾದ ಅಹಾರ, ನೀರಿನ ಬಾಟಲಿಗೆ ಅವಕಾಶ ಕೊಟ್ಟಿರಲಿಲ್ಲ. ಬದಲಿಗೆ ಪರೀಕ್ಷಾ ಕೇಂದ್ರದಲ್ಲಿಯೇ ನೀರು ಕುಡಿಯಲು ವ್ಯವಸ್ಥೆ ಮಾಡಲಾಗಿತ್ತು.. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್‌ಗಳು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಂತಿರಲಿಲ್ಲ. ಹ್ಯಾಟ್, ಮಾಸ್ಕ್ ಧರಿಸದಂತೆ ಸೂಚನೆ ನೀಡಲಾಗಿತ್ತು. ಪ್ರವೇಶ ಪತ್ರ, ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿತ್ತು. ಕೊನೆಯ ಬೆಲ್ ಹೊಡೆಯೋವರೆಗೂ ಪರೀಕ್ಷಾ ಹಾಲ್​ನಿಂದ ಅಭ್ಯರ್ಥಿಗಳು ಹೊರ ಹೋಗುವಂತಿರಲಿಲ್ಲ.

ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗ ಸೂಚಿ ನೀಡಲಾಗಿತ್ತು. ದೊಡ್ಡ ದೊಡ್ಡ ಡಿಸೈನ್, ಬಟನ್, ಹೂಗಳು ಇರುವ ಬಟ್ಟೆ ಧರಿಸುವಂತಿಲ್ಲ. ಪೂರ್ಣ ತೋಳಿನ ಬಟ್ಟೆ ಬಳಸದಂತೆ, ಮುಜುಗರವಾಗದಂತೆ ಅರ್ಧ ತೋಳಿನ‌ ಬಟ್ಟೆ, ಟಾಪ್ ಬಳಸಲು ಸೂಚನೆ ನೀಡಲಾಗಿತ್ತು. ಹೈ ಹೀಲ್ಸ್ ಚಪ್ಪಲಿ-ಶೂ ನಿಷೇಧ ಹೇರಲಾಗಿತ್ತು. ಮಹಿಳಾ ಅಭ್ಯರ್ಥಿಗಳಿಗೂ ಯಾವುದೇ ರೀತಿಯ ಲೋಹ, ಚೈನ್ ಬಳಸದಂತೆ ಸೂಚನೆ ಕೊಡಲಾಗಿದ್ದು, ಮಂಗಳ ಸೂತ್ರ ಮತ್ತು ಕಾಲುಂಗುರಕ್ಕೆ ಮಾತ್ರ ವಿಶೇಷ ಅನುಮತಿ ನೀಡಲಾಗಿತ್ತು. ಒಟ್ನಲ್ಲಿ ಈ ಬಾರಿ ಪಿಎಸ್ಐ ಪರೀಕ್ಷೆಯಲ್ಲಿ ಯಾವುದೇ ಗೋಲ್ಮಾಲ್ ನಡೆಯದಂತೆ ಶಿಸ್ತಿನ ಕ್ರಮ ಕೈಗೊಳ್ಳಲಾಗಿತ್ತು.

Comments (0)

Your email address will not be published. Required fields are marked *

Back to top button
Verified by MonsterInsights