ಮದುವೆ ಮಂಟಪಗಳಿಗೆ ಗ್ಯಾಸ್ ಟ್ರಬಲ್; ಸಿಲಿಂಡರ್ ತರೋ ಜವಾಬ್ದಾರಿ ನಿಮ್ಮದೇ!

ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್ಗಳ ಅಭಾವ ತೀವ್ರಗೊಂಡಿದ್ದು, ಇದರ ನೇರ ಹೊಡೆತ ಈಗ ಮದುವೆ ಮಾರುಕಟ್ಟೆಗೆ ಬಿದ್ದಿದೆ. ಸಾಮಾನ್ಯವಾಗಿ ಕಲ್ಯಾಣ ಮಂಟಪಗಳೇ ಅಡುಗೆಗಾಗಿ ವಾಣಿಜ್ಯ ಸಿಲಿಂಡರ್ಗಳನ್ನು ಒದಗಿಸುತ್ತಿದ್ದವು. ಆದರೆ ಈಗಿನ ಅಭಾವದಿಂದಾಗಿ, “ಮದುವೆ ಬುಕ್ಕಿಂಗ್ ಮಾಡಿದವರೇ ಸಿಲಿಂಡರ್ ತರಬೇಕು” ಎಂದು ಮಂಟಪಗಳ ಸಿಬ್ಬಂದಿ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದಾರೆ. ಇದರಿಂದಾಗಿ ಮದುವೆ ನಿಶ್ಚಯವಾಗಿರುವ ವಧು-ವರರ ಕುಟುಂಬದವರು ಈಗ ಸಿಲಿಂಡರ್ಗಾಗಿ ಅಲೆಯುವಂತಾಗಿದೆ.
ವಾಣಿಜ್ಯ ಸಿಲಿಂಡರ್ಗಳ ಲಭ್ಯತೆ ಸಂಪೂರ್ಣ ಕುಸಿದಿರುವ ಕಾರಣ, ಕಲ್ಯಾಣ ಮಂಟಪಗಳು ಮಾತ್ರವಲ್ಲದೆ ಹೋಟೆಲ್ ಉದ್ಯಮ ಕೂಡ ನಲುಗಿಹೋಗಿದೆ. ಹಲವಾರು ಪ್ರಸಿದ್ಧ ಹೋಟೆಲ್ಗಳು ಗ್ಯಾಸ್ ಇಲ್ಲದೆ ಮೆನು ಬದಲಾಯಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವು ಹೋಟೆಲ್ಗಳು ಅನಿವಾರ್ಯವಾಗಿ ಬೀಗ ಹಾಕುತ್ತಿವೆ. ಮದುವೆಯಂತಹ ದೊಡ್ಡ ಶುಭ ಕಾರ್ಯಕ್ರಮಗಳಲ್ಲಿ ನೂರಾರು ಜನರಿಗೆ ಅಡುಗೆ ಸಿದ್ಧಪಡಿಸಲು ಸಿಲಿಂಡರ್ ಇಲ್ಲದಿದ್ದರೆ ಕಾರ್ಯಕ್ರಮ ನಡೆಸುವುದೇ ಅಸಾಧ್ಯ ಎಂಬಂತಾಗಿದೆ.
ಇತ್ತೀಚಿನ ದಿನಗಳಲ್ಲಿ ₹2000 ದಾಟಿದರೂ ವಾಣಿಜ್ಯ ಸಿಲಿಂಡರ್ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತಿಲ್ಲ. ಈ ಹಿಂದೆ ಮಂಟಪಗಳೇ ಈ ಜವಾಬ್ದಾರಿ ಹೊರುತ್ತಿದ್ದವು, ಆದರೆ ಈಗ ಸ್ಟಾಕ್ ಇಲ್ಲದ ಕಾರಣ ಕೈಚೆಲ್ಲಿವೆ. ಮದುವೆ ಛತ್ರಗಳ ಈ ಹೊಸ ನಿಯಮದಿಂದಾಗಿ ಗ್ರಾಹಕರು ಮತ್ತು ಕಲ್ಯಾಣ ಮಂಟಪಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯುತ್ತಿದೆ. ಒಟ್ಟಾರೆಯಾಗಿ, ಅಂತರಾಷ್ಟ್ರೀಯ ಯುದ್ಧದ ಎಫೆಕ್ಟ್ ಮದುವೆ ಮನೆಯೂಟಕ್ಕೂ ಕುತ್ತು ತಂದಿದೆ.




