ಸಿನಿಮಾ

‘ಮಹಾಕಾಳಿ ಪುತ್ರ’ನ ಎಂಟ್ರಿ; ಅದ್ದೂರಿ ಟೈಟಲ್ ಲಾಂಚ್..!

ಟಿಟಿಪಿ ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಮಹಾಕಾಳಿ ಪುತ್ರ’ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮೊದಲ ಪೋಸ್ಟರ್ ಬಿಡುಗಡೆ ಸಮಾರಂಭವು ಅತ್ಯಂತ ಸಡಗರದಿಂದ ನೆರವೇರಿತು. ಕನ್ನಡದ ಜೊತೆಗೆ ಹಿಂದಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿಯೂ ಈ ಚಿತ್ರ ತೆರೆಕಾಣುತ್ತಿರುವುದು ವಿಶೇಷವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಚಿತ್ರತಂಡ ಸಜ್ಜಾಗಿದೆ. ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.

ಈ ಸಮಾರಂಭಕ್ಕೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ಸಾಕ್ಷಿಯಾಗಿದ್ದರು. ಹೆಬ್ಬಾಳ ಜೆಡಿಎಸ್ ಅಧ್ಯಕ್ಷರಾದ ಪುನೀತ್, ಮಾಗಡಿ ಜೆಡಿಎಸ್ ಅಧ್ಯಕ್ಷರಾದ ಶಂಕರ್ ಹಾಗೂ ಡಿವೈನ್ ವ್ಯಾಲಿ ಸಂಸ್ಥಾಪಕರಾದ ಮೋನಿಶ್ ಉಪಾಧ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕ ಗಿರೀಶ್ ಎಸ್.ಎಂ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಗಿರಿಗೌಡ ಅವರು ಕಥೆ ಬರೆದಿದ್ದು ನಿರ್ದೇಶನ ಮಾಡಲಿದ್ದಾರೆ. ರಾಹುಲ್ ವಾಸ್ತರ್ ಅವರ ಸಂಗೀತ ನಿರ್ದೇಶನವಿರಲಿದೆ.

ಚಿತ್ರದಲ್ಲಿ ‘ಹಳ್ಳಿಕಾರ್ ಜಾನುವಾರು’ಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಇದು ಮಣ್ಣಿನ ಸೊಗಡಿನ ಕಥೆಯೆಂದು ಬಿಂಬಿತವಾಗಿದೆ. ಕರ್ನಾಟಕದ ಹೆಮ್ಮೆಯ ತಳಿಯಾದ ಹಳ್ಳಿಕಾರ್ ಎತ್ತುಗಳ ಗತ್ತು ಮತ್ತು ಶಕ್ತಿಯನ್ನು ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬರಲಿರುವ ಈ ಚಿತ್ರವು ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲಿದ್ದು, ಗಾಂಧಿನಗರದಲ್ಲಿ ಭಾರೀ ಕುತೂಹಲ ಮೂಡಿಸಿದೆ.

Comments (0)

Your email address will not be published. Required fields are marked *

Back to top button