ಕ್ರೈಂ ಸ್ಟೋರಿಸುದ್ದಿ

ಖಾಕಿ ಕಸ್ಟಡಿಯಲ್ಲಿ ದಲಿತ ಯುವಕನ ಸಾವು;ಪೊಲೀಸರ ವಿರುದ್ಧ ಗಂಭೀರ ಆರೋಪ!

ತಮಿಳುನಾಡು: ಮಧುರೈನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ದಲಿತ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕಾಶ್ ಎಂಬ ಯುವಕನನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದರು. ಆದರೆ, ಪೊಲೀಸ್ ವಶದಲ್ಲಿದ್ದಾಗಲೇ ಯುವಕ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು.

ಯುವಕನ ಸಾವು ಸಹಜವಲ್ಲ, ಇದು ಪೊಲೀಸರು ನೀಡಿದ ಅತಿಯಾದ ದೈಹಿಕ ಹಿಂಸೆಯಿಂದ ಸಂಭವಿಸಿದೆ ಎಂದು ಆಕಾಶ್ ತಂದೆ ನೇರವಾಗಿ ಆರೋಪಿಸಿದ್ದಾರೆ. “ನನ್ನ ಮಗನ ಕಾಲುಗಳ ಮೇಲೆ ದೊಡ್ಡ ಕಲ್ಲಿನಿಂದ ಜಜ್ಜಿದ ಗುರುತುಗಳಿವೆ, ಪೊಲೀಸರು ಆತನಿಗೆ ಅಮಾನುಷವಾಗಿ ಹೊಡೆದು ಕೊಂದಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯು ಸ್ಥಳೀಯವಾಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಮೃತನ ಕುಟುಂಬಸ್ಥರು ಇದೀಗ ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಘಟನೆಯ ಸುತ್ತಲಿನ ನಿಗೂಢತೆ ಮತ್ತು ಕುಟುಂಬದ ಗಂಭೀರ ಆರೋಪಗಳು ಮಧುರೈನಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯ ಕೇಳಿಬರುತ್ತಿದೆ.

Comments (0)

Your email address will not be published. Required fields are marked *

Back to top button