ಕ್ರಿಕೆಟ್ವಿಶೇಷಸುದ್ದಿ

ಟಿ20 ವಿಶ್ವಕಪ್ ಫೈನಲ್ ಬೆನ್ನಲ್ಲೇ ಸೂರ್ಯಕುಮಾರ್ ನಿವೃತ್ತಿ ?


ಅಹಮದಾಬಾದ್: 2026ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅಜೇಯ ಓಟ ಮುಂದುವರಿಸಿದ್ದು, ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಹಣಾಹಣಿಗೆ ಸಜ್ಜಾಗಿದೆ. ಆದರೆ, ಈ ಸಂಭ್ರಮದ ನಡುವೆಯೇ ನಾಯಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.


ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ ಈವರೆಗೆ ಒಂದು ಟಿ20 ಸರಣಿಯನ್ನೂ ಸೋತಿಲ್ಲ. ಆದರೆ, ಪ್ರಸ್ತುತ ವಿಶ್ವಕಪ್‌ನಲ್ಲಿ ಬ್ಯಾಟರ್ ಆಗಿ ಸೂರ್ಯ ತಮ್ಮ ಎಂದಿನ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಅಮೆರಿಕ ವಿರುದ್ಧದ 84 ರನ್ ಹೊರತುಪಡಿಸಿದರೆ, ಉಳಿದ 7 ಪಂದ್ಯಗಳಲ್ಲಿ ಅವರು 40 ರನ್ ದಾಟಿಲ್ಲ. 35 ವರ್ಷ ವಯಸ್ಸಿನ ಸೂರ್ಯ ಕೇವಲ ಟಿ20 ಮಾದರಿಗೆ ಸೀಮಿತವಾಗಿದ್ದು, ಏಕದಿನ ಮತ್ತು ಟೆಸ್ಟ್ ತಂಡದಿಂದ ಈಗಾಗಲೇ ದೂರ ಉಳಿದಿದ್ದಾರೆ.


ಶ್ರೇಯಸ್ ಅಯ್ಯರ್ ಅವರಂತಹ ಯುವ ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿರುವುದು ಸೂರ್ಯ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಬಿಸಿಸಿಐ ಕೇವಲ ನಾಯಕತ್ವದ ಆಧಾರದ ಮೇಲೆ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವುದಿಲ್ಲ ಎಂಬ ನಿಯಮವಿರುವುದರಿಂದ, ಫಾರ್ಮ್ ಕೊರತೆ ಸೂರ್ಯ ಅವರ ವೃತ್ತಿಜೀವನಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.


ವಿಶ್ಲೇಷಕರ ಪ್ರಕಾರ, ಒಂದು ವೇಳೆ ಭಾರತ ವಿಶ್ವಕಪ್ ಮುಕುಟ ಮುಡಿಗೇರಿಸಿಕೊಂಡರೆ, ಸೂರ್ಯಕುಮಾರ್ ಯಾದವ್ ‘ಚಾಂಪಿಯನ್ ನಾಯಕ’ನಾಗಿ ಗೌರವಯುತವಾಗಿ ನಿವೃತ್ತಿ ಘೋಷಿಸಬಹುದು ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಸೂರ್ಯ ಅಥವಾ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಫೈನಲ್ ಪಂದ್ಯದ ನಂತರವೇ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

Comments (0)

Your email address will not be published. Required fields are marked *

Back to top button