
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ದಾಖಲೆಯ 17ನೇ ಬಜೆಟ್ನಲ್ಲಿ ರಾಜ್ಯದ ಯುವಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ನಿರುದ್ಯೋಗಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ವಿಶೇಷವಾಗಿ, ನ್ಯಾಯಾಲಯದ ಪ್ರಕರಣಗಳಿಂದ ಉದ್ಯೋಗ ನೇಮಕಾತಿಯಲ್ಲಿ ಉಂಟಾಗಿದ್ದ ವಿಳಂಬವನ್ನು ಗಮನದಲ್ಲಿಟ್ಟುಕೊಂಡು, ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ 5 ವರ್ಷಗಳ ವಯೋಮಿತಿ ಸಡಿಲಿಕೆ ಘೋಷಿಸಿರುವುದು ಈ ಬಾರಿಯ ಬಜೆಟ್ನ ಅತ್ಯಂತ ಗಮನಾರ್ಹ ನಿರ್ಧಾರವಾಗಿದೆ.
ಸುಸ್ಥಿರ ಆರ್ಥಿಕತೆ ಮತ್ತು ಜಿಐ ಮಾನ್ಯತೆ:
ರಾಜ್ಯದ ಸಮಗ್ರ ಪ್ರಗತಿಗಾಗಿ ಕಾರ್ಮಿಕ ಕಲ್ಯಾಣ, ಹಸಿರು ಆರ್ಥಿಕತೆ ಮತ್ತು ಪ್ರವಾಸೋದ್ಯಮದಂತಹ ಆರ್ಥಿಕ ಪ್ರಮೇಯಗಳನ್ನು ಸರ್ಕಾರ ಮುನ್ನೆಲೆಗೆ ತಂದಿದೆ. ಕರ್ನಾಟಕದ 45ಕ್ಕೂ ಹೆಚ್ಚು ವಿಶಿಷ್ಟ ಉತ್ಪನ್ನಗಳಿಗೆ ಭೌಗೋಳಿಕ ಸೂಚಕ ಮಾನ್ಯತೆ ದೊರೆತಿರುವುದು ಹೆಮ್ಮೆಯ ವಿಷಯವಾಗಿದ್ದು, ಇದು ಗ್ರಾಮೀಣ ಭಾಗದಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ದೊಡ್ಡ ಪ್ರೇರಣೆಯಾಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆಗೆ ಒತ್ತು ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ವ್ಯಾಪಾರ ಮತ್ತು ಕೈಗಾರಿಕಾ ವೃದ್ಧಿಗೆ ಸರ್ಕಾರ ದಾರಿ ಮಾಡಿಕೊಟ್ಟಿದೆ.
ಮೂಲಸೌಕರ್ಯಕ್ಕೆ ಕೋಟಿ ಕೋಟಿ ಅನುದಾನ:
ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ರಾಜ್ಯವು ದಾಪುಗಾಲು ಹಾಕುತ್ತಿದ್ದು, ಕಳೆದ ವರ್ಷವಷ್ಟೇ 8,600 ಕೋಟಿ ರೂಪಾಯಿಗಳ ಬೃಹತ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿರುವ ಸರ್ಕಾರ, 2026-27ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 4,000 ಕೋಟಿ ರೂಪಾಯಿ ವೆಚ್ಚದ ಹೊಸ ಕಾಮಗಾರಿಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಈ ಮೂಲಕ ರಾಜ್ಯದ ಸಂರ್ಪಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಿದ್ದರಾಮಯ್ಯನವರ ಸರ್ಕಾರ ಬದ್ಧವಾಗಿದೆ ಎಂಬುದು ಈ ಆಯವ್ಯಯದಿಂದ ಸ್ಪಷ್ಟವಾಗಿದೆ.



