
ಹಿಂದೂ ಮಹಾಸಾಗರದಲ್ಲಿ ಇರಾನ್ನ ಯುದ್ಧನೌಕೆ ‘ಐರಿಸ್ ದೇನಾ’ ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿರುವ ಘಟನೆ ಈಗ ಭಾರತದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪಶ್ಚಿಮ ಏಷ್ಯಾದ ಸಂಘರ್ಷ ಈಗ ನೇರವಾಗಿ ಭಾರತದ ‘ಹಿತ್ತಲಿಗೆ’ ಅಂದರೆ ಹಿಂದೂ ಮಹಾಸಾಗರಕ್ಕೆ ತಲುಪಿರುವುದು ದೇಶದ ಭದ್ರತೆ ಮತ್ತು ಇಂಧನ ಪೂರೈಕೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮಧ್ಯಪ್ರಾಚ್ಯದ ಸಂಘರ್ಷ ಈಗ ನಮ್ಮ ಸಮುದ್ರ ತೀರಕ್ಕೆ ಬಂದು ತಲುಪಿದೆ. ಇರಾನ್ ನೌಕೆಯನ್ನು ಅಮೆರಿಕ ನಮ್ಮದೇ ಸಾಗರ ವ್ಯಾಪ್ತಿಯಲ್ಲಿ ಹೊಡೆದುರುಳಿಸಿದೆ. ಇದು ಭಾರತದ ಇಂಧನ ಭದ್ರತೆ ಮತ್ತು ಆರ್ಥಿಕತೆಗೆ ದೊಡ್ಡ ಅಪಾಯ ತಂದೊಡ್ಡಿದೆ. ಆದರೆ ಈ ಗಂಭೀರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದು ಆಘಾತಕಾರಿ” ಎಂದು ಕಿಡಿಕಾರಿದ್ದಾರೆ.
ಭಾರತದ ‘ವ್ಯೂಹಾತ್ಮಕ ಸ್ವಾಯತ್ತತೆ’ (Strategic Autonomy) ವಿಚಾರದಲ್ಲಿ ಪ್ರಧಾನಿ ಮೋದಿ ಅವರು ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ರಾಹುಲ್, “ಇಂತಹ ಬಿಕ್ಕಟ್ಟಿನ ಸಮಯದಲ್ಲಿ ದೇಶವನ್ನು ಮುನ್ನಡೆಸಲು ಒಬ್ಬ ಬಲಿಷ್ಠ ಮತ್ತು ಸ್ಪಷ್ಟ ನಿಲುವಿನ ನಾಯಕನ ಅಗತ್ಯವಿದೆ. ಆದರೆ ಮೋದಿ ಸರ್ಕಾರವು ಭಾರತದ ಹಿತಾಸಕ್ತಿಗಿಂತ ಹೆಚ್ಚಾಗಿ ಬಾಹ್ಯ ಶಕ್ತಿಗಳ ಒತ್ತಡಕ್ಕೆ ಮಣಿಯುತ್ತಿದೆ” ಎಂದು ಟೀಕಿಸಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಭಾರತಕ್ಕೆ ಬರುವ ಕಚ್ಚಾ ತೈಲದ ಹಡಗುಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಇಂಧನ ಬಿಕ್ಕಟ್ಟು ತಲೆದೋರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಸೂಕ್ಷ್ಮ ವಿಚಾರದಲ್ಲಿ ಕೇಂದ್ರ ಸರ್ಕಾರವು ಕೂಡಲೇ ದೇಶದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.




