ಜಿಲ್ಲೆಸುದ್ದಿ

ಗದಗದಲ್ಲಿ ಹೋಳಿ ಸಂಭ್ರಮದ ನಡುವೆ ಭೀಕರ ಅಪಘಾತ!

ಗದಗ: ಹರ್ತಿ ಗ್ರಾಮದ ಹೊರವಲಯದಲ್ಲಿ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಮಣ್ಣನ ಉತ್ಸವ ಮುಗಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಈ ದುರಂತ ಸಂಭವಿಸಿದ್ದು, ಮೃತರ ಕುಟುಂಬಗಳಲ್ಲಿ ಶೋಕದ ಛಾಯೆ ಆವರಿಸಿದೆ. ಹಿರೇಕೊಪ್ಪ ಗ್ರಾಮದಿಂದ ಗೋಜನೂರಿಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಟಾಟಾ ಏಸ್ ಗೂಡ್ಸ್ ವಾಹನವು ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಹಿರೇಕೊಪ್ಪ ಗ್ರಾಮದ ನಿಂಗಪ್ಪ ಯಳವತ್ತಿ (36) ಮತ್ತು ಮುತ್ತಪ್ಪ ಸತ್ತಿಗೇರಿ (35) ಎಂಬುವವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವಾಹನದಲ್ಲಿದ್ದ ಇನ್ನು ಎಂಟು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಹೋಳಿ ಹಬ್ಬದ ಅಂಗವಾಗಿ ರಾತ್ರಿ ಪೂರ್ತಿ ಕಾಮಣ್ಣನ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಯುವಕರು ಮುಂಜಾನೆ ಮನೆಗೆ ಮರಳುತ್ತಿದ್ದರು. ಮುಂಜಾನೆ 6 ಗಂಟೆಯ ಸುಮಾರಿಗೆ ವಾಹನ ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಾಹನದ ಮುಂಭಾಗವು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆಯನ್ನು ಸಾರುತ್ತಿದೆ.

ಈ ಸಂಬಂಧ ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಬ್ಬದ ದಿನವೇ ಇಬ್ಬರು ಯುವಕರು ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಮರುಕ ಉಂಟುಮಾಡಿದೆ.

Comments (0)

Your email address will not be published. Required fields are marked *

Back to top button