ಜಿಲ್ಲೆಸುದ್ದಿ

ಕಲ್ಲಂಗಡಿ ಕ್ಯಾಂಟರ್ ಪಲ್ಟಿ; ಹಣ್ಣುಗಳನ್ನು ಹೊತ್ತೊಯ್ಯಲು ಮುಗಿಬಿದ್ದ ಜನ!

ದೊಡ್ಡಬಳ್ಳಾಪುರ: ಮೇಷ್ಟ್ರು ಮನೆ ಸರ್ಕಲ್ ಬಳಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಕಲ್ಲಂಗಡಿ ಹಣ್ಣುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚೆನ್ನೈನಿಂದ ದಾವಣಗೆರೆಯ ಹೊನ್ನಾಳಿಗೆ ಸಾವಿರಾರು ಕಲ್ಲಂಗಡಿಗಳನ್ನು ಹೊತ್ತು ಸಾಗುತ್ತಿದ್ದ ಈ ವಾಹನವು, ಅನಿರೀಕ್ಷಿತವಾಗಿ ವೇಗ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯಲ್ಲಿದ್ದ ಮೂರು ಡಿವೈಡರ್‌ಗಳನ್ನು ಹಾರಿ ಪಕ್ಕದ ಪಳ್ಳಕ್ಕೆ ಬಿದ್ದಿದೆ. ಅಪಘಾತದ ತೀವ್ರತೆಗೆ ಕ್ಯಾಂಟರ್‌ನಲ್ಲಿದ್ದ ಕಲ್ಲಂಗಡಿ ಹಣ್ಣುಗಳು ರಸ್ತೆಯಾದ್ಯಂತ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹೆದ್ದಾರಿಯುದ್ದಕ್ಕೂ ಹಣ್ಣುಗಳ ರಾಶಿಯೇ ಕಂಡುಬಂದಿದೆ.

ಕ್ಯಾಂಟರ್ ಪಲ್ಟಿಯಾಗಿ ಕಲ್ಲಂಗಡಿಗಳು ರಸ್ತೆಗೆ ಬೀಳುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸ್ಥಳೀಯರು, ಚಾಲಕನ ನೆರವಿಗೆ ಧಾವಿಸುವ ಬದಲು ಹಣ್ಣುಗಳನ್ನು ಹೊತ್ತೊಯ್ಯುವಲ್ಲಿ ಮಗ್ನರಾಗಿದ್ದರು. ಕೆಲವರು ಕೈಯಲ್ಲಿ ಹಿಡಿದುಕೊಂಡು ಹೋದರೆ, ಇನ್ನೂ ಕೆಲವರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಹಣ್ಣುಗಳನ್ನು ತುಂಬಿಕೊಂಡು ಹೋದ ದೃಶ್ಯಗಳು ಕಂಡುಬಂದವು.

ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಕ್ಯಾಂಟರ್ ಚಾಲಕ 22 ವರ್ಷದ ವೇದಮೂರ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಅತಿವೇಗವೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Comments (0)

Your email address will not be published. Required fields are marked *

Back to top button