Top Newsದೇಶ/ವಿದೇಶಸುದ್ದಿ

ಜಾಗತಿಕ ತೈಲ ಸಮರ; ಇರಾನ್‌ನಿಂದ ಹಾರ್ಮೋಜ್ ಜಲಸಂಧಿ ಬಂದ್!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿದ್ದು, ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಗಳಿಗೆ ಪ್ರತಿಯಾಗಿ ಇರಾನ್ ಅತ್ಯಂತ ಅಪಾಯಕಾರಿ ತಂತ್ರವನ್ನು ಪ್ರಯೋಗಿಸಿದೆ. ಜಾಗತಿಕ ತೈಲ ವ್ಯಾಪಾರದ ಜೀವನಾಡಿ ಎಂದೇ ಕರೆಯಲ್ಪಡುವ ಹಾರ್ಮೋಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಲಾಕ್ ಮಾಡಿದೆ. ಈ ನಿರ್ಧಾರದಿಂದಾಗಿ ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಇರಾನ್ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದು, ಪ್ರಸ್ತುತ 700ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಜಲಸಂಧಿಯಲ್ಲೇ ಸಿಲುಕಿಕೊಂಡು ಸಾಗರ ಮಧ್ಯೆ ಸ್ತಬ್ಧವಾಗಿವೆ.

ಈ ಗಂಭೀರ ಬಿಕ್ಕಟ್ಟಿನ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾಗತಿಕ ತೈಲ ಮಾರುಕಟ್ಟೆಯನ್ನು ಕುಸಿತದಿಂದ ರಕ್ಷಿಸಲು ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಜಲಸಂಧಿಯಲ್ಲಿ ಸಿಲುಕಿರುವ ತೈಲ ಟ್ಯಾಂಕರ್‌ಗಳಿಗೆ ತಕ್ಷಣವೇ ರಕ್ಷಣೆ ನೀಡುವಂತೆ ಅಮೆರಿಕದ ಬಲಿಷ್ಠ ನೌಕಾಪಡೆಗೆ ಟ್ರಂಪ್ ಆದೇಶಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಟ್ಯಾಂಕರ್‌ಗಳಿಗೆ ಬೆಂಗಾವಲಾಗಿ ನಿಂತು ಅವುಗಳ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಮೆರಿಕದ ಈ ದಿಟ್ಟ ನಡೆಯು ಯುದ್ಧ ಪೀಡಿತ ಈ ವಲಯದಲ್ಲಿ ಮತ್ತಷ್ಟು ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಈ ಬಿಕ್ಕಟ್ಟು ಭಾರತದ ಪಾಲಿಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ. ಹಾರ್ಮೋಜ್ ಜಲಸಂಧಿಯಲ್ಲಿ ಭಾರತಕ್ಕೆ ಸೇರಿದ 27 ಹಡಗುಗಳು ಸಿಲುಕಿಕೊಂಡಿದ್ದು, ಸುಮಾರು 10,000 ಕೋಟಿ ರೂಪಾಯಿ ಮೌಲ್ಯದ ಸರಕು ಅಪಾಯದಲ್ಲಿದೆ. ಭಾರತದ ಇಂಧನ ಭದ್ರತೆಯ ಮೇಲೆ ಇದು ನೇರ ಪರಿಣಾಮ ಬೀರುವ ಆತಂಕ ಎದುರಾಗಿತ್ತು. ಆದರೆ, ಅಮೆರಿಕ ನೌಕಾಪಡೆಗೆ ಟ್ರಂಪ್ ನೀಡಿರುವ ರಕ್ಷಣಾ ಆದೇಶವು ಭಾರತ ಸೇರಿದಂತೆ ವಿಶ್ವದ ಇತರೆ ರಾಷ್ಟ್ರಗಳಲ್ಲಿ ಸಣ್ಣ ಸಮಾಧಾನ ತಂದಿದೆ. ತೈಲ ಕೊರತೆಯ ಭೀತಿಯಿಂದ ತತ್ತರಿಸಿದ್ದ ಜಾಗತಿಕ ಮಾರುಕಟ್ಟೆ ಈಗ ಅಮೆರಿಕದ ಮುಂದಿನ ಹಂತದ ಕಾರ್ಯಾಚರಣೆಯನ್ನು ಎದುರು ನೋಡುತ್ತಿದೆ.

Comments (0)

Your email address will not be published. Required fields are marked *

Back to top button