Top Newsದೇಶ/ವಿದೇಶಸುದ್ದಿ

ಇರಾನ್ ವಿರುದ್ಧ ಅಖಾಡಕ್ಕಿಳಿದ ಯುರೋಪ್ ಮಹಾಶಕ್ತಿಗಳು!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಈಗ ಯುರೋಪ್ ರಾಷ್ಟ್ರಗಳಿಗೂ ವ್ಯಾಪಿಸಿದ್ದು, ಇರಾನ್ ವಿರುದ್ಧ ಅಮೆರಿಕದೊಂದಿಗೆ ಕೈಜೋಡಿಸಲು ಯುಕೆ, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಅಧಿಕೃತವಾಗಿ ನಿರ್ಧರಿಸಿವೆ. ಸೈಪ್ರಸ್ ಸೇರಿದಂತೆ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಇರಾನ್ ಸರಣಿ ಡ್ರೋಣ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ ಬೆನ್ನಲ್ಲೇ, ಈ ಪ್ರಬಲ ರಾಷ್ಟ್ರಗಳು ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಕುಗ್ಗಿಸಲು ಜಂಟಿ ಕಾರ್ಯಾಚರಣೆಗೆ ಸಜ್ಜಾಗಿವೆ. ತನ್ನ ಮಿತ್ರರಾಷ್ಟ್ರಗಳ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಮರುಸ್ಥಾಪಿಸುವುದು ನಮ್ಮ ಮೊದಲ ಆದ್ಯತೆ ಎಂದು ಈ ಮೂರು ದೇಶಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಸೈಪ್ರಸ್‌ನಲ್ಲಿರುವ ಅಕ್ರೋತಿರಿ ಮಿಲಿಟರಿ ನೆಲೆಯ ಮೇಲೆ ಶಂಕಿತ ಇರಾನ್ ಪ್ರೇರಿತ ಡ್ರೋಣ್ ದಾಳಿ ನಡೆದಿದ್ದು, ಇದು ಬ್ರಿಟನ್ ಪಡೆಯನ್ನು ಕೆರಳಿಸಿದೆ. ಅದೇ ರೀತಿ, ಫ್ರೆಂಚ್ ನೌಕಾ ನೆಲೆಯ ಹ್ಯಾಂಗರ್ ಮೇಲೆ ನಡೆದ ಭೀಕರ ಡ್ರೋಣ್ ಅಟ್ಯಾಕ್‌ನಿಂದಾಗಿ ಭಾರಿ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇರಾನ್ ನೇರವಾಗಿ ಅಂತಾರಾಷ್ಟ್ರೀಯ ಭದ್ರತೆಗೆ ಸವಾಲು ಹಾಕುತ್ತಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ಉಲ್ಬಣಿಸುತ್ತಿರುವ ಈ ಪರಿಸ್ಥಿತಿಯನ್ನು ಹತೋಟಿಗೆ ತರಲು ಅರಬ್ ರಾಷ್ಟ್ರಗಳ ಜೊತೆಗೂಡಿ ಕೆಲಸ ಮಾಡುವುದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಘೋಷಿಸಿವೆ.

ಇರಾನ್ ತನ್ನ ಪ್ರಭಾವವನ್ನು ಬಳಸಿ ಮಿತ್ರರಾಷ್ಟ್ರಗಳ ನೆಲೆಗಳನ್ನೇ ಗುರಿಯಾಗಿಸುತ್ತಿರುವುದು ಈಗ ಜಾಗತಿಕ ಸಮರಕ್ಕೆ ನಾಂದಿ ಹಾಡುವ ಲಕ್ಷಣಗಳನ್ನು ತೋರಿಸುತ್ತಿದೆ. ಅಮೆರಿಕದ ನೇತೃತ್ವದಲ್ಲಿ ಯುಕೆ, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಇರಾನ್‌ನ ಕ್ಷಿಪಣಿ ತಾಣಗಳು ಮತ್ತು ಡ್ರೋಣ್ ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಲು ರಣತಂತ್ರ ರೂಪಿಸುತ್ತಿವೆ. ಇದರಿಂದಾಗಿ ಮಧ್ಯಪ್ರಾಚ್ಯದಾದ್ಯಂತ ಯುದ್ಧದ ಉದ್ವಿಗ್ನತೆ ಮಿತಿಮೀರಿದ್ದು, ಜಗತ್ತು ಮತ್ತೊಂದು ದೊಡ್ಡ ಮಟ್ಟದ ಸಂಘರ್ಷದ ಅಂಚಿನಲ್ಲಿ ಬಂದು ನಿಂತಿದೆ.

Comments (0)

Your email address will not be published. Required fields are marked *

Back to top button