ಜಿಲ್ಲೆಸುದ್ದಿ

ಓಡುತ್ತಲೇ ಕುಸಿದು ಬಿದ್ದ ಕುಂದಾಪುರ ಪಿಎಸ್‌ಐ!

ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟದ ಸಂಭ್ರಮವು ಇಂದು ಬೆಳ್ಳಂಬೆಳಿಗ್ಗೆ ಮಹಾ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಸಿರ್ ಹುಸೇನ್ ಅವರು ಓಡುತ್ತಿರುವಾಗಲೇ ಆಕಸ್ಮಿಕವಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕ ಮತ್ತು ಸೈಬರ್ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ 5 ಕಿಲೋಮೀಟರ್ ಓಟವು ಅಂತಿಮವಾಗಿ ಇಲಾಖೆಯ ದಕ್ಷ ಅಧಿಕಾರಿಯೊಬ್ಬರ ಪ್ರಾಣವನ್ನೇ ಬಲಿಪಡೆದಿರುವುದು ಎಲ್ಲರಿಗೂ ಆಘಾತ ತಂದಿದೆ.

ಜಿಲ್ಲಾ ಪೊಲೀಸ್ ನಮ್ಮ ಹೆಮ್ಮೆ ಎಂಬ ಘೋಷವಾಕ್ಯದೊಂದಿಗೆ ಮ್ಯಾರಥಾನ್ ಆರಂಭಗೊಂಡು ನಗರದ ತಾಲೂಕು ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಓಡುತ್ತಿದ್ದ ವೇಳೆ 58 ವರ್ಷದ ನಾಸಿರ್ ಹುಸೇನ್ ಅವರಿಗೆ ತೀವ್ರ ಸ್ವರೂಪದ ಎದೆನೋವು ಕಾಣಿಸಿಕೊಂಡು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸಿಬ್ಬಂದಿಗಳು ಮತ್ತು ವೈದ್ಯಾಧಿಕಾರಿಗಳು ಅವರನ್ನು ಸಮೀಪದ ಡಾ. ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಚಿರನಿದ್ರೆಗೆ ಜಾರಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ದೃಢಪಡಿಸಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ನಾಸಿರ್ ಹುಸೇನ್ ಅವರು 2010ರ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದು, ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು. ಇತ್ತೀಚೆಗಷ್ಟೇ ಕುಂದಾಪುರ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದ ಅವರು ಇಲಾಖೆಯಲ್ಲಿ ಅತ್ಯಂತ ಶಿಸ್ತುಬದ್ಧ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಮ್ಯಾರಥಾನ್ ಓಟದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಹೊರಟಿದ್ದ ಅಧಿಕಾರಿಯೊಬ್ಬರ ಜೀವನದ ಓಟ ಹೀಗೆ ಅರ್ಧಕ್ಕೆ ನಿಂತಿರುವುದು ಇಡೀ ಜಿಲ್ಲೆಯಲ್ಲಿ ಶೋಕದ ಛಾಯೆ ಮೂಡಿಸಿದೆ.

Comments (0)

Your email address will not be published. Required fields are marked *

Back to top button