Top Newsದೇಶ/ವಿದೇಶಸುದ್ದಿ

ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ್ಯೆ; ಮಹಿಳೆಯರಿಂದ ಭರ್ಜರಿ ಸಂಭ್ರಮ!

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲ ಅಲಿ ಖಮೇನಿ ಹತ್ಯೆಯಾಗಿರುವುದು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಇರಾನ್ ಸರ್ಕಾರ ತನ್ನ ನಾಯಕನ ಅಗಲಿಕೆಗೆ 40 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಿ ಕಂಬನಿ ಸುರಿಸುತ್ತಿದ್ದರೆ, ಇತ್ತ ಇರಾನ್‌ನ ಮಹಿಳೆಯರು ಮಾತ್ರ ಈ ಸಾವನ್ನು ಹಬ್ಬದಂತೆ ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.

ಇರಾನ್ ಸ್ಟೇಟ್ ಮೀಡಿಯಾ ಖಮೇನಿ ಸಾವನ್ನು ಅಧಿಕೃತವಾಗಿ ಖಚಿತಪಡಿಸಿದ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಇರಾನ್ ಮಹಿಳೆಯರ ಸಂಭ್ರಮಾಚರಣೆಯ ವೀಡಿಯೊಗಳು ವೈರಲ್ ಆಗುತ್ತಿವೆ. “ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಇರಾನ್ ಈಗ ಮುಕ್ತವಾಗುತ್ತಿದೆ” ಎಂದು ಯುವತಿಯೊಬ್ಬಳು ಸಂತಸ ಹಂಚಿಕೊಂಡಿದ್ದರೆ, ಮತ್ತೊಬ್ಬ ಮಹಿಳೆ ರಸ್ತೆಯಲ್ಲಿ ಕಣ್ಣೀರು ಹಾಕುತ್ತಾ ಸಾಗುವ ಇರಾನ್ ಪ್ರಜೆಗಳ ಮುಂದೆ “ಖಮೇನಿ ಈಸ್ ಡೆಡ್” ಎಂದು ಕೂಗುತ್ತಾ ಅಮೆರಿಕಕ್ಕೆ ಧನ್ಯವಾದ ಅರ್ಪಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಹಲವು ಯುವತಿಯರು ಈ ಸಾವನ್ನು ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದು, ಇದು ದಶಕಗಳ ಕಾಲದ ದಬ್ಬಾಳಿಕೆಯಿಂದ ಸಿಕ್ಕ ಮುಕ್ತಿ ಎಂದು ಬಣ್ಣಿಸುತ್ತಿದ್ದಾರೆ.

ಖಮೇನಿ ಅವರು ತಮ್ಮ ಉನ್ನತ ಸಹಾಯಕರೊಂದಿಗೆ ಅತ್ಯಂತ ಗುಪ್ತವಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆ ನಡೆಸುತ್ತಿದ್ದಾಗಲೇ ಈ ದಾಳಿ ನಡೆದಿದೆ ಎನ್ನಲಾಗಿದೆ. ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಜಿ ಕಾರ್ಯದರ್ಶಿ ಅಲಿ ಶಮ್ಖಾನಿ, ಐಆರ್‌ಜಿಸಿ ಕಮಾಂಡರ್ ಮೊಹಮ್ಮದ್ ಪಾಕ್‌ಪೂರ್ ಮತ್ತು ಅಲಿ ಲಾರಿಜಾನಿ ಅವರೊಂದಿಗೆ ಖಮೇನಿ ಗಂಭೀರ ಚರ್ಚೆಯಲ್ಲಿ ತೊಡಗಿದ್ದ ಸಂದರ್ಭದಲ್ಲೇ ಕ್ಷಿಪಣಿಗಳು ಅವರಿದ್ದ ಜಾಗವನ್ನು ಗುರಿಯಾಗಿಸಿ ಅಪ್ಪಳಿಸಿವೆ. ಈ ಹಠಾತ್ ದಾಳಿಯು ಇರಾನ್‌ನ ಭದ್ರತಾ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದು, ಇಡೀ ಇಸ್ಲಾಮಿಕ್ ಗಣರಾಜ್ಯ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ.

Comments (0)

Your email address will not be published. Required fields are marked *

Back to top button