Top Newsದೇಶ/ವಿದೇಶಸುದ್ದಿ

ಪ್ರೆಗ್ನೆಂಟ್ ಮಾಡಿದರೆ 13 ಲಕ್ಷ ರೂ. ಸ್ಯಾಲರಿ!? ‘ಬೇಬಿ ಮೇಕಿಂಗ್’ ಜಾಬ್ ಸ್ಕ್ಯಾಮ್ ಪತ್ತೆ!

ಬಿಹಾರ: ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಅತ್ಯಂತ ವಿಲಕ್ಷಣ ಹಾಗೂ ಅಷ್ಟೇ ಭಯಾನಕವಾದ ಸೈಬರ್ ವಂಚನೆಯ ಜಾಲವೊಂದು ಇದೀಗ ಬಯಲಾಗಿದೆ. “ಮಹಿಳೆಯರನ್ನು ಗರ್ಭಿಣಿ ಮಾಡಿ, ಲಕ್ಷಾಂತರ ರೂಪಾಯಿ ಸಂಪಾದಿಸಿ” ಎಂಬ ಆಘಾತಕಾರಿ ಆಫರ್ ನೀಡಿ ಯುವಕರನ್ನು ವಂಚಿಸುತ್ತಿದ್ದ ದೊಡ್ಡ ಗ್ಯಾಂಗ್ ಅನ್ನು ಬಿಹಾರದ ನವಾಡ ಸೈಬರ್ ಪೊಲೀಸರು ಸೆರೆಹಿಡಿದಿದ್ದಾರೆ. ಈ ಜಾಲವು ‘ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್’ ಎಂಬ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಕರ್ಷಕ ಜಾಹೀರಾತುಗಳನ್ನು ನೀಡಿ, ಸುಲಭವಾಗಿ ಹಣ ಮಾಡುವ ಹಂಬಲದಲ್ಲಿದ್ದ ಅಮಾಯಕ ಯುವಕರನ್ನು ಬಲೆಗೆ ಬೀಳಿಸುತ್ತಿತ್ತು.

ಸಂತಾನವಿಲ್ಲದ ಶ್ರೀಮಂತ ಮಹಿಳೆಯರನ್ನು ಗರ್ಭಿಣಿ ಮಾಡಿದರೆ ಬರೋಬ್ಬರಿ 13 ಲಕ್ಷ ರೂಪಾಯಿ ನಗದು ಹಣ ಮತ್ತು ಸುಸಜ್ಜಿತ 2BHK ಫ್ಲಾಟ್ ನೀಡುವುದಾಗಿ ಈ ಖದೀಮರು ಆಮಿಷ ಒಡ್ಡುತ್ತಿದ್ದರು. ನಂಬಿಕೆ ಹುಟ್ಟಿಸಲು ವಾಟ್ಸಾಪ್ ಮೂಲಕ ಸುಂದರ ಯುವತಿಯರ ಫೋಟೋಗಳನ್ನು ಕಳಿಸುತ್ತಿದ್ದ ಈ ತಂಡ, ಯುವಕರು ಆಸಕ್ತಿ ತೋರಿಸುತ್ತಿದ್ದಂತೆಯೇ ಅವರ ಬಳಿ ನೋಂದಣಿ ಶುಲ್ಕದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿತ್ತು. ಕೇವಲ ಒಂದು ನೋಂದಣಿಗಾಗಿ 20,000 ರೂಪಾಯಿಗಳವರೆಗೆ ಹಣ ಪಡೆದು ನಂತರ ನಾಪತ್ತೆಯಾಗುತ್ತಿದ್ದರು.

ಈ ವಿಲಕ್ಷಣ ವಂಚನೆಯ ಬಗ್ಗೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ನವಾಡ ಪೊಲೀಸರು, ಈ ಕಿಲಾಡಿ ಗ್ಯಾಂಗ್‌ನ ಕಿಂಗ್‌ಪಿನ್‌ಗಳನ್ನು ಅರೆಸ್ಟ್ ಮಾಡಿದ್ದಾರೆ. ಕೆಲಸವಿಲ್ಲದ ಯುವಕರ ಅಸಹಾಯಕತೆಯನ್ನು ಮತ್ತು ಅವರ ಲೈಂಗಿಕ ಆಕರ್ಷಣೆಯನ್ನು ಬಂಡವಾಳ ಮಾಡಿಕೊಂಡು ಈ ಗ್ಯಾಂಗ್ ಲಕ್ಷಾಂತರ ರೂಪಾಯಿ ದೋಚುತ್ತಿತ್ತು. ಇಂತಹ ವಿಚಿತ್ರ ಜಾಹೀರಾತುಗಳನ್ನು ನಂಬಿ ಹಣ ಕಳೆದುಕೊಳ್ಳಬೇಡಿ ಎಂದು ಪೊಲೀಸರು ಈಗ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button