ಕಾರವಾರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ತಮ್ಮ ದೆಹಲಿ ಪ್ರವಾಸದ ಬಗ್ಗೆ ಹೇಳಿಕೆ ನೀಡುತ್ತಿರುವ ಬೆಂಬಲಿಗ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್‌ನಿಂದ ಬುಲಾವ್ ಬಂದಿದೆ ಎಂದು ಹೇಳಿಕೆ ನೀಡಿದ್ದ ಇಕ್ಬಾಲ್ ಅವರಿಗೆ “ಬಾಯಿ ಮುಚ್ಚಿಕೊಂಡು ಇರಬೇಕು” ಎಂದು ಖಡಕ್ ಆಗಿ ವಾರ್ನಿಂಗ್ ನೀಡಿರುವ ಡಿಸಿಎಂ, ಇಂತಹ ಹೇಳಿಕೆಗಳಿಂದ ತಮಗೆ ಒಳ್ಳೆಯದಾಗುವ ಬದಲು ತೊಂದರೆಯೇ ಹೆಚ್ಚು ಎಂದು ಎಚ್ಚರಿಸಿದ್ದಾರೆ.
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮಾತ್ರವಲ್ಲದೆ ಶಾಸಕರಾದ ರವಿ ಮತ್ತು ಶಿವಗಂಗಾ ಕೂಡ ಅನಗತ್ಯವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಬಾರದು ಎಂದು ಸೂಚಿಸಿರುವ ಅವರು, “ಎಲ್ಲಾ ಇಕ್ಬಾಲ್‌ಗಳು ಬಾಯಿ ಹೊಲಿದುಕೊಂಡಿದ್ದರೆ ನನಗೆ ಶ್ರೇಯಸ್ಸು” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಲೋಕಾಯುಕ್ತ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು ತಾವು ಅದರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಈ ಬಗ್ಗೆ ಬಿಜೆಪಿಯವರೇ ಉತ್ತರಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.


