ಜಿಲ್ಲೆಸುದ್ದಿ

ಫ್ರೀ ಅಂತ ಊರೂರು ಸುತ್ತುತ್ತೀರಾ?;ಬಿಎಂಟಿಸಿ ಕಂಡಕ್ಟರ್‌ನಿಂದ ಮಹಿಳೆಯರಿಗೆ ನಿಂದನೆ

ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದಕ್ಕೆ ಕಂಡಕ್ಟರ್ ಒಬ್ಬರು ಮಹಿಳೆಯರನ್ನು ಅವಹೇಳನ ಮಾಡಿ, ಕಿರಿಕ್ ಮಾಡಿರುವ ಘಟನೆ ನಡೆದಿದೆ. ಚನ್ನಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ ಭಾರಿ ವಾಹನ ದಟ್ಟಣೆ ಇದ್ದದ್ದನ್ನು ಕಂಡು ಸಿಟ್ಟಿಗೆದ್ದ ಕಂಡಕ್ಟರ್, ಪ್ರಯಾಣಿಕರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಈ ವೇಳೆ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ’ ಯೋಜನೆಯನ್ನು ಟೀಕಿಸಿದ್ದಲ್ಲದೆ, ಮಹಿಳೆಯರಿಗೆ “ಮನೆಯಲ್ಲಿ ಕೆಲಸ ಇಲ್ವಾ? ಫ್ರೀ ಅಂತ ಊರೂರು ಸುತ್ತುತ್ತೀರಾ?” ಎಂದು ಏಕವಚನದಲ್ಲಿ ನಿಂದಿಸಿದ್ದಾನೆ.

ಬಸ್‌ನಲ್ಲಿದ್ದ ಓರ್ವ ಮಹಿಳೆಯನ್ನು ಕೆಂಗೇರಿ ಬಳಿ ಬಸ್‌ನಿಂದ ಬಲವಂತವಾಗಿ ಕೆಳಗಿಳಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ತಿಳಿದುಬಂದಿದೆ. ಕಂಡಕ್ಟರ್ ವರ್ತನೆಯಿಂದ ಆಘಾತಕ್ಕೊಳಗಾದ ಮಹಿಳೆಯು ಕೂಡಲೇ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಕಂಡಕ್ಟರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆಯು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ವರ್ತನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಶಕ್ತಿ ಯೋಜನೆಯ ಲಾಭ ಪಡೆಯುತ್ತಿರುವ ಮಹಿಳೆಯರ ವಿರುದ್ಧ ಪದೇ ಪದೇ ಇಂತಹ ಅಸಭ್ಯ ವರ್ತನೆಗಳು ಕೇಳಿಬರುತ್ತಿದ್ದು, ಬಿಎಂಟಿಸಿ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಅಗತ್ಯವಿದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button