Top Newsದೇಶ/ವಿದೇಶವಿಶೇಷಸುದ್ದಿ

ಗೂಗಲ್-ಓಪನ್‌ಎಐಗೆ ಸವಾಲು ಹಾಕಿದ ಬೆಂಗಳೂರಿನ ‘ಸರ್ವಂ AI..!

ಬೆಂಗಳೂರು: ‘ಸರ್ವಂ AI’ ಸಂಸ್ಥೆಯು ಜಾಗತಿಕ ತಂತ್ರಜ್ಞಾನ ಲೋಕದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ. ಅಮೆರಿಕ ಮತ್ತು ಚೀನಾದಂತಹ ರಾಷ್ಟ್ರಗಳ ಪ್ರಾಬಲ್ಯವಿರುವ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ, ಈ ಸ್ಟಾರ್ಟ್‌ಅಪ್ ಗೂಗಲ್ ಜೆಮಿನಿ ಮತ್ತು ಓಪನ್‌ಎಐನ ಚಾಟ್‌ಜಿಪಿಟಿಯಂತಹ ದಿಗ್ಗಜ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ವಿಶೇಷವಾಗಿ ಭಾರತೀಯ ಭಾಷೆಗಳ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಮಾನದಂಡಗಳಲ್ಲಿ ಸರ್ವಂ AI ಈ ಜಾಗತಿಕ ಮಾದರಿಗಳನ್ನೇ ಮೀರಿಸಿರುವುದು ಗಮನಾರ್ಹ ಸಾಧನೆಯಾಗಿದೆ.

ಡಾ. ಪ್ರತ್ಯೂಷ್ ಕುಮಾರ್ ಮತ್ತು ಡಾ. ವಿವೇಕ್ ರಾಘವನ್ ಅವರು 2023 ರಲ್ಲಿ ಸ್ಥಾಪಿಸಿದ ಈ ಸಂಸ್ಥೆಯು ಭಾರತದ ವಿಶಿಷ್ಟ ಅಗತ್ಯಗಳಿಗೆ ತಕ್ಕಂತೆ AI ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಐಐಟಿ ಪದವೀಧರರಾದ ಈ ಇಬ್ಬರೂ ತಜ್ಞರು ಮೈಕ್ರೋಸಾಫ್ಟ್ ಮತ್ತು ಐಬಿಎಂನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರು ಸಿದ್ಧಪಡಿಸಿರುವ ‘ಸರ್ವಂ ವಿಷನ್’ ಮತ್ತು ‘ಬುಲ್‌ಬುಲ್’ ಎಂಬ ತಾಂತ್ರಿಕ ಪರಿಕರಗಳು ಭಾರತೀಯ ಭಾಷೆಗಳನ್ನು ನಿಖರವಾಗಿ ಅರ್ಥೈಸುವಲ್ಲಿ ಜಾಗತಿಕ ಎಐ ಮಾಡೆಲ್‌ಗಳಿಗಿಂತ ಹೆಚ್ಚು ದಕ್ಷತೆ ತೋರಿವೆ.

ಸರ್ವಂ AI ನ ಮತ್ತೊಂದು ಮೈಲಿಗಲ್ಲು ಎಂದರೆ ದೇಶೀಯವಾಗಿ ಸಿದ್ಧಪಡಿಸಲಾದ ‘ಸರ್ವಂ ಕೆಜೆ ಎಐ ಸ್ಮಾರ್ಟ್ ಗ್ಲಾಸ್’. ಈ ಸ್ಮಾರ್ಟ್ ಕನ್ನಡಕವು ದೃಶ್ಯಗಳನ್ನು ಸೆರೆಹಿಡಿಯುವ, ಆಲಿಸುವ ಮತ್ತು ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವ ವಿಶೇಷ ಸಾಮರ್ಥ್ಯ ಹೊಂದಿದೆ. ಇತ್ತೀಚೆಗೆ ನಡೆದ ಎಐ ಇಂಪಾಕ್ಟ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಈ ಗ್ಯಾಜೆಟ್‌ನ ಅನುಭವ ಪಡೆದಿರುವುದು ಇದರ ಯಶಸ್ಸಿಗೆ ಸಾಕ್ಷಿಯಾಗಿದೆ. ಈ ಉತ್ಪನ್ನವು ಮುಂಬರುವ ಮೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಭಾರತೀಯ ಭಾಷೆಗಳು, ಕಡಿಮೆ ಇಂಟರ್ನೆಟ್ ವೇಗ ಮತ್ತು ಮೊಬೈಲ್ ಪ್ಲಾಟ್‌ಫಾರ್ಮ್‌ಗಳನ್ನು ಗಮನದಲ್ಲಿಟ್ಟುಕೊಂಡು ಹಗುರವಾದ ಮತ್ತು ವೇಗದ AI ಮಾದರಿಗಳನ್ನು ನಿರ್ಮಿಸುವುದು ಸರ್ವಂ AI ನ ಮುಖ್ಯ ಉದ್ದೇಶವಾಗಿದೆ. ಇವರ OCR ಮತ್ತು ಧ್ವನಿ ತಂತ್ರಜ್ಞಾನಗಳು ಸರ್ಕಾರಿ ಸೇವೆಗಳು, ಬ್ಯಾಂಕಿಂಗ್ ಮತ್ತು ಡಿಜಿಟಲ್ ದಾಖಲೀಕರಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿವೆ. ಕೇವಲ ಎರಡು ವರ್ಷಗಳಲ್ಲಿ ಅಂತರಾಷ್ಟ್ರೀಯ ಗಮನ ಸೆಳೆದಿರುವ ಈ ಸಂಸ್ಥೆಯು ಭಾರತೀಯ ಎಐ ಕ್ಷೇತ್ರಕ್ಕೆ ಹೊಸ ಭರವಸೆ ಮೂಡಿಸಿದೆ.

Comments (0)

Your email address will not be published. Required fields are marked *

Back to top button