ಚಿತ್ರದುರ್ಗದ ಭೀಕರ ಖಾಸಗಿ ಬಸ್ ಅಗ್ನಿದುರಂತದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಟ್ಟುನಿಟ್ಟಿನ ಸೂಚನೆಯಂತೆ ಖಾಸಗಿ ಬಸ್‌ಗಳಿಗೆ ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಿದೆ.
ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆ ನೀಡಿರುವ ಸಲಹೆಗಳನ್ನು ಆಧರಿಸಿ ಸಾರಿಗೆ ಇಲಾಖೆಯು ಬಸ್ ಮಾಲೀಕರಿಗೆ ಖಡಕ್ ನಿರ್ದೇಶನ ನೀಡಿದ್ದು, ಫೆಬ್ರವರಿ 28ರೊಳಗೆ ಎಲ್ಲಾ ಸ್ಲೀಪರ್ ಕೋಚ್ ಮತ್ತು ಅಖಿಲ ಭಾರತ ಪ್ರವಾಸಿ ಬಸ್‌ಗಳಲ್ಲಿ ನಿಗದಿಪಡಿಸಿದ 11 ಕಡ್ಡಾಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಅಂತಿಮ ಗಡುವು ವಿಧಿಸಿದೆ.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕಳೆದ ತಿಂಗಳು ಖಾಸಗಿ ಬಸ್ ಮಾಲೀಕರು, ಕೋಚ್ ನಿರ್ಮಾಣ ಕಂಪನಿಗಳ ಪ್ರತಿನಿಧಿಗಳು ಹಾಗೂ ಉನ್ನತ ಸಾರಿಗೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಸುರಕ್ಷತಾ ಮಾನದಂಡಗಳ ಬಗ್ಗೆ ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಪ್ರಮುಖವಾಗಿ ಬಸ್ ಬಾಡಿ ನಿರ್ಮಾಣದ ವಿಧಾನದಲ್ಲಿ ಸುಧಾರಣೆ ತರುವುದು, ತುರ್ತು ನಿರ್ಗಮನ ದ್ವಾರಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಅಗ್ನಿಶಾಮಕ ಸಾಧನಗಳ ಕಡ್ಡಾಯ ಅಳವಡಿಕೆಯ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಪ್ರಯಾಣಿಕರ ಪ್ರಾಣಹಾನಿ ತಡೆಗಟ್ಟಲು ಎಮರ್ಜೆನ್ಸಿ ಎಕ್ಸಿಟ್ ಬಳಿ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಒಟ್ಟು 11 ನಿಯಮಗಳನ್ನು ಪಾಲಿಸುವುದು ಈಗ ಕಡ್ಡಾಯವಾಗಿದೆ.
ವಿಶೇಷವಾಗಿ ಎಸಿ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಅದನ್ನು ನಂದಿಸುವ ವಿಧಾನಗಳ ಬಗ್ಗೆ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಮಾಹಿತಿ ನೀಡಬೇಕು ಮತ್ತು ತುರ್ತು ಪರಿಸ್ಥಿತಿಯಲ್ಲಿ ಕಿಟಕಿ ಗ್ಲಾಸ್‌ಗಳನ್ನು ಒಡೆದು ಹೊರಬರಲು ಅನುಕೂಲವಾಗುವಂತೆ ಪ್ರತಿ ಬಸ್‌ನಲ್ಲಿ ಹ್ಯಾಮರ್‌ಗಳನ್ನು ಸುಲಭವಾಗಿ ಸಿಗುವಂತೆ ಇರಿಸಬೇಕು. ಇದರೊಂದಿಗೆ ಬೆಂಕಿಯ ಮುನ್ಸೂಚನೆ ನೀಡುವ ಎಚ್ಚರಿಕೆ ಅಲಾರಂ ವ್ಯವಸ್ಥೆ ಹಾಗೂ ಎಮರ್ಜೆನ್ಸಿ ಡೋರ್ ಮೂಲಕ ಕೆಳಕ್ಕೆ ಜಿಗಿಯಲು ಅನುಕೂಲವಾಗುವಂತೆ ಮೆಟ್ಟಿಲುಗಳ ಸೌಲಭ್ಯವನ್ನು ಒದಗಿಸುವಂತೆ ಸಚಿವರು ಬಸ್ ಬಾಡಿ ಬಿಲ್ಡಿಂಗ್ ಕಂಪನಿಗಳಿಗೆ ಮತ್ತು ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ನಿಗದಿತ ಸಮಯದೊಳಗೆ ಈ ಬದಲಾವಣೆಗಳನ್ನು ಮಾಡಿಕೊಳ್ಳದ ಬಸ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.


