ಯಾದಗಿರಿ: ಮದ್ಯದ ವ್ಯಸನ ಮನುಷ್ಯನನ್ನು ಎಷ್ಟು ಕ್ರೂರವಾಗಿಸುತ್ತದೆ ಎಂಬುದಕ್ಕೆ ಯಾದಗಿರಿಯ ರಾಜೀವ್ ಗಾಂಧಿ ನಗರದಲ್ಲಿ ನಡೆದ ಈ ಘೋರ ದುರಂತವೇ ಸಾಕ್ಷಿ. ಕುಡಿತ ಬಿಡುವಂತೆ ಬುದ್ಧಿ ಹೇಳಿದ 11 ವರ್ಷದ ಸ್ವಂತ ಮಗಳನ್ನೇ ತಾಯಿಯೊಬ್ಬಳು ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮೃತ ಬಾಲಕಿಯನ್ನು ಪ್ರತಿಭಾ ಎಂದು ಗುರುತಿಸಲಾಗಿದ್ದು, ಈಕೆಯ ತಾಯಿ ನಿರ್ಮಲಾ ಎಂಬಾಕೆ ಆರೋಪಿಯಾಗಿದ್ದಾಳೆ.
ತಾಯಿ ಪ್ರತಿದಿನ ಮದ್ಯ ಸೇವನೆ ಮಾಡಿ ಹಣ ಖರ್ಚು ಮಾಡುತ್ತಿದ್ದನ್ನು ಕಂಡು ಮಗಳು ಪ್ರತಿಭಾ ನೊಂದಿದ್ದಳು. “ನೀನು ಹೀಗೆ ಕುಡಿದು ಹಣ ಖರ್ಚು ಮಾಡಿದರೆ ನಮಗೆ ಊಟಕ್ಕೆ ತೊಂದರೆಯಾಗುತ್ತದೆ, ನೀನು ಕುಡಿದು ಏನಾದರೂ ಆದರೆ ನಮ್ಮನ್ನು ನೋಡಿಕೊಳ್ಳುವವರು ಯಾರು? ಅಮ್ಮ ದಯವಿಟ್ಟು ಕುಡಿಯುವುದನ್ನು ಬಿಟ್ಟುಬಿಡು” ಎಂದು ಮಗಳು ಆಕೆಗೆ ವಿನಂತಿಸಿದ್ದಳು. ಮಗಳ ಈ ಹಿತವಚನದಿಂದ ಕುಪಿತಗೊಂಡ ನಿರ್ಮಲಾ, ಮಗಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ಕೃತ್ಯ ಎಸಗಿದ ನಂತರ ಪೊಲೀಸರನ್ನು ಮತ್ತು ಸಾರ್ವಜನಿಕರನ್ನು ದಿಕ್ಕು ತಪ್ಪಿಸಲು ಆಕೆ ಹೊಸ ಕಥೆಯೊಂದನ್ನು ಕಟ್ಟಿದ್ದಳು. “ಜ್ಯೂಸ್ ಕುಡಿಯಲು 15 ರೂಪಾಯಿ ಕೇಳಿದ್ದಳು, ನಾನು ಕೊಡಲಿಲ್ಲ ಎಂಬ ಕಾರಣಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ನಂಬಿಸಲು ಯತ್ನಿಸಿದ್ದಳು. ಮಗಳನ್ನು ಕೊಂದ ನಂತರ ಆಕೆಯ ಕುತ್ತಿಗೆಗೆ ಸೀರೆ ಕಟ್ಟಿ ಆತ್ಮಹತ್ಯೆಯಂತೆ ಚಿತ್ರಿಸಲು ಪ್ರಯತ್ನಿಸಿದ್ದಳು.
ಆದರೆ, ಪೊಲೀಸರ ತನಿಖೆ ಮತ್ತು ಸ್ಥಳದಲ್ಲಿ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ ನಿರ್ಮಲಾಳ ಸುಳ್ಳು ಬಯಲಾಗಿದೆ. ಮಗಳನ್ನೇ ಕೊಂದ ತಾಯಿಯನ್ನು ಯಾದಗಿರಿ ನಗರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


