ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಆರ್‌ಸಿಬಿ ಪಂದ್ಯಗಳು ನಡೆಯುವುದು ಗೃಹ ಇಲಾಖೆಯ ಅನುಮತಿಯ ಮೇಲೆ ನಿರ್ಧಾರವಾಗಲಿದೆ. ಐಪಿಎಲ್ ಹತ್ತಿರವಾಗುತ್ತಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಪಂದ್ಯಗಳ ಆಯೋಜನೆಗೆ ಸರ್ಕಾರದಿಂದ ಕ್ಲಿಯರೆನ್ಸ್ ಸಿಗಬೇಕಿದ್ದು, ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ಜಸ್ಟೀಸ್ ಕುನ್ಹಾ ವರದಿಯ ಶಿಫಾರಸುಗಳು ಹಾಗೂ ಪೊಲೀಸ್ ಆಯುಕ್ತರ ನೇತೃತ್ವದ ಸಮಿತಿ ನೀಡಿರುವ ಸುರಕ್ಷತಾ ಕ್ರಮಗಳ ಪಾಲನೆ ಅತ್ಯಗತ್ಯವಾಗಿದೆ. ಈ ಕುರಿತು ಮಾತನಾಡಿದ ಗೃಹ ಸಚಿವರು, “ಅಭಿಮಾನಿಗಳು ಪಂದ್ಯವನ್ನು ಬಯಸುತ್ತಾರೆ ನಿಜ, ಆದರೆ ನಮಗೆ ಸುರಕ್ಷತೆ ಬಹಳ ಮುಖ್ಯ. ಕಾಲ್ತುಳಿತದಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಕ್ರೀಡಾಂಗಣದವರು ಸರ್ಕಾರದ ಶಿಫಾರಸುಗಳನ್ನು ಎಷ್ಟರ ಮಟ್ಟಿಗೆ ಪೂರೈಸಿದ್ದಾರೆ ಎಂಬುದನ್ನು ಪರಿಶೀಲಿಸಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಆರ್‌ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗವು ಗೃಹ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಫೆಬ್ರವರಿ 12 ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಪಂದ್ಯಗಳ ಭವಿಷ್ಯ ಅಂದು ನಿರ್ಧಾರವಾಗಲಿದೆ. ಇದರ ನಡುವೆ ಸಂಸದ ತೇಜಸ್ವಿ ಸೂರ್ಯ ಅವರ ‘ಖಾಲಿ ಟ್ರಂಕ್’ ಪ್ರತಿಭಟನೆಗೆ ತಿರುಗೇಟು ನೀಡಿದ ಪರಮೇಶ್ವರ್, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಬಾಕಿ ಅನುದಾನವನ್ನು ಮೊದಲು ಕೊಡಿಸಲಿ ಎಂದು ಟಾಂಗ್ ನೀಡಿದ್ದಾರೆ.


