Uncategorized

ರಸ್ತೆ ಗುಂಡಿಗಳಿಂದ ಕಂಪನಿಗಳ ವಲಸೆ.. ಸರ್ಕಾರದ ವಿರುದ್ಧ ಹೆಚ್​​ಡಿಕೆ ಕಿಡಿ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಕಂಪನಿಗಳು ವಲಸೆ ಹೋಗುವ ವಿಚಾರವಾಗಿ ಟ್ವೀಟ್​​ ಮಾಡಿರುವ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.. ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಪಡೆಯುತ್ತಿದೆ.ಈ ಅಪಮಾನಕ್ಕೆ ಸಿಎಂ, ಡಿಸಿಎಂ ಅವರೇ ಹೊಣೆಗಾರರು. ಭ್ರಷ್ಟರ ಕೈಯಲ್ಲಿ ಸಿಕ್ಕಿ ಬೆಂಗಳೂರು ನರಳುತ್ತಿದೆ..

ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ, ಕಂಡೆಲ್ಲೆಲ್ಲ ಕಸದ ರಾಶಿ, ಗ್ರೇಟರ್ ಬೆಂಗಳೂರು ಎಂದರೆ ಇದೇನಾ. ಜಿಬಿಎ ಏನು ಮಾಡುತ್ತಿದೆ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಆಡಳಿತದ ಘೋರ ವೈಫಲ್ಯವಾಗಿದೆ ಎಂದು ಉದ್ಯಮಿಗಳು ದೂರಿರುವುದು ಸರಿ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಉದ್ಯಮಿಗಳು ಸರಕಾರದ ವೈಫಲ್ಯವನ್ನು ಇಷ್ಟು ಕಠಿಣವಾಗಿ ಎತ್ತಿ ತೋರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಈ ಸರಕಾರಕ್ಕೆ ಎಳ್ಳಷ್ಟೂ ಸಂಕೋಚ, ಆತ್ಮಾಭಿಮಾನವಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಗುಂಡಿಪಾಲು ಮಾಡಿದೆ ಎಂದು ಕಿಡಿಕಾರಿದ್ದಾರೆ.

ಕಂಪನಿಗಳು ರಾಜ್ಯ ಸರಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆರಾಜ್ಯಗಳತ್ತ ವಲಸೆ ಹೋಗುತ್ತಿವೆ. ಆ ರಾಜ್ಯಗಳು ಇಂಥ ಸಮಯಕ್ಕೇ ಕಾಯುತ್ತಾ ರಿಯಾಯ್ತಿ ಮೇಲೆ ರಿಯಾಯ್ತಿಗಳನ್ನು ನೀಡುತ್ತಿವೆ. ಭಂಡ ಸರಕಾರಕ್ಕೆ ಅರ್ಥವಾಗುತ್ತಿಲ್ಲ. ಈ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ ಎಂದು ಹೇಳಿದ್ದಾರೆ. ಇನ್ನು ಕಂಪನಿಗಳಿಗೆ ಮನವಿ ಮಾಡಿದ ಕುಮಾರಸ್ವಾಮಿ ಅವರು, ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ.ಇಡೀ ಕರ್ನಾಟಕದ ಜನತೆ ಇದ್ದೇವೆ. ಹೋಗುತ್ತೇವೆ ಎನ್ನುವ ಮಾತನ್ನು ಮನಸ್ಸಿನಿಂದ ತೆಗೆದುಬಿಡಿ. ನಾವೆಲ್ಲರೂ ಸೇರಿ ಬೆಂಗಳೂರು ನಗರವನ್ನು ಬದಲಿಸೋಣ. We will Make Bengaluru Great Again ಎಂದಿದ್ದಾರೆ

Comments (0)

Your email address will not be published. Required fields are marked *

Back to top button