Top Newsರಾಜ್ಯ

ಚಿಕ್ಕಾಸು ಪಡೆಯದೇ ಅರಣ್ಯ ರಾಯಭಾರಿಯಾದ ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಶೇಷ ಅಂದರೆ, ಮೂಲತಃ ಪರಿಸರ ಪ್ರೇಮಿ ಆಗಿರುವ ಅನಿಲ್ ಕುಂಬ್ಳೆ ಅವರು ಇದಕ್ಕೆ ಚಿಕ್ಕಾಸನ್ನು ಪಡೆದಿಲ್ಲ.

ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಹಿತಾಸಕ್ತಿಯಿಂದ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಖ್ಯಾತ ಕ್ರಿಕೆಟಿಗ ಮತ್ತು ಮಾಜಿ ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮಾಹಿತಿಯನ್ನು ಎಕ್ಸ್ ಖಾತೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಂಚಿಕೊಂಡಿದ್ದಾರೆ.

ಅನಿಲ್ ಕುಂಬ್ಳೆ ಅವರಿಗೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇದೆ.

ವನ್ಯಜೀವಿಗಳ ಮೇಲಿನ ಅಪಾರ ಕಾಳಜಿ, ಅರಣ್ಯದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವರು ಹೊಂದಿರುವ ಖ್ಯಾತಿಯಿಂದಾಗಿ ಅವರು ಈ ಜವಾಬ್ದಾರಿಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ.

ಅನಿಲ್ ಕುಂಬ್ಳೆ ಅವರು ಯಾವುದೇ ಸಂಭಾವನೆ ಪಡೆಯದೇ, ಸಂಪೂರ್ಣವಾಗಿ ಸಮಾಜಮುಖಿ ಉದ್ದೇಶದಿಂದ ಈ ಸೇವೆಗಾಗಿ ಸಮ್ಮತಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂತಸ ವ್ಯಕ್ತಪಡಿಸಿದ್ದಾರೆ.

ಅನಿಲ್ ಕುಂಬ್ಳೆ ಅವರು ರಾಯಭಾರಿ ಆಗಿರುವ ಕಾರಣ ನಮ್ಮ ರಾಜ್ಯದ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಪರಿಸರ ಜಾಗೃತಿಗೆ ಹೊಸ ದಿಕ್ಕು ಮತ್ತು ಚೈತನ್ಯ ದೊರೆಯಲಿದೆ ಎಂಬ ಭರವಸೆ ನನಗಿದೆ ಎಂದು ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button