Top Newsರಾಜ್ಯಸುದ್ದಿ

ಬೆಂಗಳೂರಿನ ಎಲೆಕ್ಟ್ರಿಕ್‌ ಬೈಕ್‌ ಶೋರೂಮ್‌ನಲ್ಲಿ ಅಗ್ನಿ ಅವಘಡ: ಹಲವು ವಾಹನಗಳು ಬೆಂಕಿಗಾಹುತಿ

ಬೆಂಗಳೂರು: ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಲ್ಲಿನ ಮತ್ತೊಂದು ಎಲೆಕ್ಟ್ರಿಕ್‌ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೈಕ್‌ಗಳು ಬೆಂಕಿಗಾಹುತಿಯಾಗಿವೆ. ಇಂದು ಒಕಿನೊವಾ ಎಲೆಕ್ಟ್ರಿಕ್‌ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬ್ಯಾಟರಿ ಓವರ್‌ ಚಾರ್ಜ್‌ ಆಗಿ ಸ್ಫೋಟಗೊಂಡ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ರಾಜಾಜಿನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿರುವ ಕಣ್ವ ಆಸ್ಪತ್ರೆ ಸಮೀಪದಲ್ಲಿರುವ ಶುಕ್ರ ಮೋಟರ್‌ರ‍ಸನ ಓಕಿನೋವಾ ಎಲೆಕ್ಟ್ರಿಕಲ್‌ ಬೈಕ್‌ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಇಡೀ ಕಟ್ಟಡವನ್ನೇ ಬೆಂಕಿ ಆವರಿಸಿಕೊಂಡ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಬೈಕ್‌ಗಳು ಬೆಂಕಿಗಾಹುತಿಯಾಗಿವೆ. ಇನ್ನು ಓಕಿನೋವಾ ಎಲೆಕ್ಟ್ರಿಕಲ್‌ ಬೈಕ್‌ ಶೋ ರೂಂನಲ್ಲಿ 74 ಬೈಕ್​ಗಳು ಇದ್ದವು. ಈ ಪೈಕಿ 19 ಬೈಕ್​ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, 9 ಬೈಕ್​ಗಳಿಗೆ ಸ್ವಲ್ಪ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಶೋರೂಂನಲ್ಲಿದ್ದ ಸಿಬ್ಬಂದಿಗಳು ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಅಗ್ನಿ ಅವಘಡ ಹಿನ್ನಲೆಯಲ್ಲಿ ಅಗ್ನಿಶಾಮಕ ವಾಹನಗಳು ರಸ್ತೆಯಲ್ಲಿ ನಿಂತಿದ್ದರಿಂದ ಈ ಮಾರ್ಗದಲ್ಲಿ ಕಿಲೋಮೀಟರ್‌ಗಟ್ಟಲೆ ಸಂಚಾರದಟ್ಟಣೆ ಉಂಟಾಗಿತ್ತು. ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button