Top Newsಸುದ್ದಿ

ಟರ್ಕಿ ಹೋಟೆಲ್​​​ನಲ್ಲಿ ಭಾರೀ ಅಗ್ನಿ ಅವಘಡ: ಸಾವಿನ ಸಂಖ್ಯೆ 76ಕ್ಕೆ ಏರಿಕೆ

ಇಸ್ತಾಂಬುಲ್:‌ ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಮಂಗಳವಾರ ಸಂಭವಿಸಿದ ಭಾರೀ ಅಗ್ನಿ ದುರಂತರದಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. 51 ಮಂದಿ ಗಾಯಗೊಂಡಿದ್ದಾರೆ.

ಶಾಲೆ ಸೆಮಿಸ್ಟರ್‌ ಹಾಲಿಡೇಸ್‌ ಸಮಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದಾಗಲೇ ಈ ಘಟನೆ ನಡೆದಿದೆ. ಟರ್ಕಿಯ ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್‌ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಘಟನೆಗೆ ಪ್ರಮುಖ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ವೇಳೆ ರೆಸಾರ್ಟ್​ನಲ್ಲಿದ್ದ ತಂದಿದ್ದ ನೂರಾರು ಮಂದಿ ಭಯಭೀತರಾಗಿದ್ದು, ಕೆಲವರು ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಒಟ್ಟು 76 ಮಂದಿ ಸಾವನ್ನಪ್ಪಿದ್ದು, 51ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು ಎಂದು ಸ್ಥಳೀಯ ಮಾಧ್ಯಮಗಳ ವರದಿಗಳು ತಿಳಿಸಿವೆ.

ರಾಜಧಾನಿ ಅಂಕಾರಾದ ವಾಯುವ್ಯಕ್ಕೆ 170 ಕಿಲೋಮೀಟರ್ (100 ಮೈಲುಗಳು) ದೂರದಲ್ಲಿರುವ ಕರ್ತಲ್ಕಯಾ ರೆಸಾರ್ಟ್‌ಗೆ ಹಲವಾರು ಸಚಿವರು ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಘಟನೆಗೆ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ವಿಷಾದ ವ್ಯಕ್ತಪಡಿಸಿದ್ದಾರೆ.

ಕಟ್ಟಡ ಕುಸಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಹೋಟೆಲ್‍ನಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ನಡುವೆ ಅಗ್ನಿ ಅವಘಡಕ್ಕೆ ಕಾರಣ ಏನೆಂಬ ಬಗ್ಗೆ ತನಿಖೆ ಮುಂದುವರೆದಿದ್ದು, ತನಿಖೆಗಾಗಿ 6 ಪ್ರಾಸಿಕ್ಯೂಟರ್‌ಗಳನ್ನು ಸರ್ಕಾರ ನೇಮಿಸಿದೆ.

Comments (0)

Your email address will not be published. Required fields are marked *

Back to top button