#Exclusive NewsTop Newsಸುದ್ದಿ

ಮಂದಿರ-ಮಸೀದಿ ವಿವಾದ ಸಲ್ಲ ಎಂದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ವಿರುದ್ಧ ಖಾವಿ ಪಡೆ ಗರಂ!

ದೇಶದಲ್ಲಿ ಹೊಸದಾಗಿ ಭುಗಿಲೆದ್ದಿರುವ ಮಂದಿರ-ಮಸೀದಿ ವಿವಾದ ಅನಗತ್ಯ ಎಂದಿರುವ ರಾಷ್ಟ್ರೀಯ ಸ್ವಯಂಸ್ವೇವಕ ಸಂಘ(ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ವಿರುದ್ಧ, ಹಲವು ಹಿಂಂದುತ್ವವಾದಿ ಸ್ವಾಮೀಜಿ ಕಿಡಿಕಾರಿದ್ದಾರೆ. ಮೋಹನ್‌ ಭಾಗವತ್‌ ಕೇವಲ ಸಂಘವನ್ನು ಮುನ್ನಡೆಸುತ್ತಿದ್ದಾರೆಯೇ ಹೊರತು ಹಿಂದುತ್ವವನ್ನಲ್ಲ ಎಂದು ಸ್ವಾಮೀಜಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮೋಹನ್‌ ಭಾಗವತ್‌ ಹೇಳಿಕೆಯನ್ನು ಖಂಡಿಸಿರುವ ಅಖಿಲ ಭಾರತ ಸಂತ ಸಮಿತಿ(ಎಕೆಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ಸ್ವಾಮಿ ಜೀತೇಂದ್ರನಾನಂದ ಸರಸ್ವತಿ, “ಈ ನಿರ್ಧಾರವನ್ನು ಧರ್ಮಗುರುಗಳು ಮಾಡಬೇಕೆ ಹೊರತು ಸಾಂಸ್ಕೃತಿಕ ಸಂಘಟನೆಯ ನಾಯಕನಲ್ಲ..” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಮಂದಿರ ಪುನರುತ್ಥಾನ ವಿಷಯ ಹಿಂದೂಗಳ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಈ ಕುರಿತು ಹಿಂದೂ ಧಾರ್ಮಿಕ ಮುಖಂಡರೇ ನಿರ್ಧಾರ ಕೈಗೊಳ್ಳಬೇಕು. ಅಲ್ಲದೇ ಧಾರ್ಮಿಕ ಗುರುಗಳ ನಿರ್ಧಾರವನ್ನು ಆರ್‌ಎಸ್‌ಎಸ್‌ ಮತ್ತು ವಿಹೆಚ್‌ಪಿ ಪಾಲಿಸಬೇಕು..” ಎಂದು ಜೀತೇಂದ್ರನಾನಂದ ಸರಸ್ವತಿ ಸೂಚ್ಯವಾಗಿ ಹೇಳಿದರು.

ಮೋಹನ್‌ ಭಾಗವತ್‌ ಅವರ ಹೇಳಿಕೆಯನ್ನು ಖಂಡಿಸಿರುವ ಮತ್ತೋರ್ವ ಸಂತ ಸ್ವಾಮಿ ರಾಮಭದ್ರಾಚಾರ್ಯ, “ಭಾಗವತ್‌ ಅವರು ಧಾರ್ಮಿಕ ಗುರುಗಳ ನಿರ್ಧಾರವನ್ನು ಅನುಸರಿಸಬೇಕೆ ಹೊರತು ಧಾರ್ಮಿಕ ಗುರುಗಳು ಅವರನ್ನು ಅನುಸರಿಸುವುದಿಲ್ಲ..” ಎಂದು ಹರಿಹಾಯ್ದಿದ್ದಾರೆ. “ದೇಶಾದ್ಯಂತ ಒಟ್ಟು 56 ಹಿಂದೂ ದೇಗುಲಗಳ ಅವಶೇಷಗಳು ದೃಢಪಟ್ಟಿವೆ. ಇಂತಹ ಸಂದರ್ಭದಲ್ಲಿ ಮಂದಿರ-ಮಸೀದಿ ವಿವಾದ ಅನಗತ್ಯ ಎಂದು ಹೇಳುವ ಹಕ್ಕು ಮೋಹನ್‌ ಭಾಗವತ್‌ ಅವರಿಗೆ ಇಲ್ಲ..” ಎಂದು ಸ್ವಾಮಿ ರಾಮಭದ್ರಾಚಾರ್ಯ ಕಿಡಿಕಾರಿದ್ಧಾರೆ.

ಮಂದಿರ-ಮಸೀದಿ ವಿವಾದ ಬೇಡ ಎನ್ನುತ್ತಿರುವ ಮೋಹನ್‌ ಭಾಗವತ್‌, ಉತ್ತರಪ್ರದೇಶದ ಸಂಭಲ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಏನು ಹೇಳುತ್ತಾರೆ? ಅವರಿಗೆ ಸಂಭಲ್‌ನಲ್ಲಿನ ಮಂದಿರ ಕಾಣುತ್ತಿಲ್ಲವೇ ಎಂದು ಸ್ವಾಮೀಜಿಗಳು ಆರ್‌ಎಸ್‌ಎಸ್‌ ಮುಖ್ಯಸ್ಥರನ್ನು ತೀವ್ರವಾಗಿ ತರಾಟೆಗೆ ತೆಗದುಕೊಂಡಿದ್ದಾರೆ.

 

 

Comments (0)

Your email address will not be published. Required fields are marked *

Back to top button