
ಮೈಸೂರು: ನಾಡದೇವಿ ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಆದೇಶಿಸಿದ್ದಾರೆ. ಸಿದ್ದರಾಮಯ್ಯ ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ. ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಸಿಎಂ ಈ ಆದೇಶ ಮಾಡಿದ್ದಾರೆ. ನಾಡದೇವಿಗೆ ಚಿನ್ನದ ರಥ ನಿರ್ಮಿಸಬೇಕು ಎಂಬ ಭಕ್ತರ, ಬೇಡಿಕೆಯನ್ನು ಅರಿತು, ಸಂಕಲ್ಪ ಮಾಡಿಕೊಂಡು ಪ್ರಯತ್ನಿಸಲಾಗಿತ್ತು. ಸಿಎಂ ಆದೇಶದಿಂದ ಈಗ ಆ ಪ್ರಯತ್ನದಲ್ಲಿ ಮೊದಲ ಹೆಜ್ಜೆಯನ್ನು ಹಿಡಲಾಗಿದೆ.
ಚಾಮುಂಡೇಶ್ವರಿ ದೇವಿ ಕನ್ನಡ ನಾಡಿನ ಅಸ್ಮಿತೆ. ಕನ್ನಡಿಗರ ಧಾರ್ಮಿಕ ಪ್ರತಿನಿಧಿ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ, ದೇವಸ್ಥಾನಕ್ಕೆ, ದೇವಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕಾಗಿಯೇ ಮೈಸೂರಿನಲ್ಲಿ ನಡೆಯುವ ದಸರಾವನ್ನು ನಾಡಹಬ್ಬ ಎಂದು ಕರೆಯಲಾಗುತ್ತದೆ. ಈ ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಕೋಟಿ ಭಕ್ತರ ಬೇಡಿಕೆಯಾಗಿತ್ತು. ಈ ಹಿನ್ನೆಲೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ನೀಡಿದ್ದರು. ಚಿನ್ನದ ರಥ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರ ತಯಾರಿಸಬೇಕು. ದೇವಸ್ಥಾನದಲ್ಲಿ ಈ ಉದ್ದೇಶಕ್ಕೋಸ್ಕರ ಪ್ರತ್ಯೇಕ ಹುಂಡಿಯೊಂದನ್ನು ಇಡಬೇಕು. ಭಕ್ತರು ಅದರಲ್ಲಿ ಹಣ ಹಾಗೂ ಚಿನ್ನವನ್ನು ಹಾಕಲು ಅವಕಾಶ ನೀಡಬೇಕು. ಸಂಗ್ರಹಿತ ಕಾಣಿಕೆ ಹಣಕ್ಕಿಂತ ಹೆಚ್ಚಿಗೆ ಬೇಕಾಗುವ ಹಣವನ್ನು ಸರ್ಕಾರ ಭರಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.
ಪುರಾಣದ ದೇವಿ ಮಹಾತ್ಮೆಯಲ್ಲಿ ತಾಯಿ ಚಾಮುಂಡಿಯ ಪ್ರಸ್ತಾಪವಿದೆ. ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ಯಲ್ಲಿ ವರ್ಣಿತವಾಗಿದೆ ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟವೆಂಬ ಹೆಸರು ಬಂದಿದೆ. ಸ್ಕಂದ ಪುರಾಣದಲ್ಲಿ ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರವೆಂಬ ಪವಿತ್ರ ಕ್ಷೇತ್ರ ಉಲ್ಲೇಖಿತವಾಗಿದೆ. ಅವುಗಳಲ್ಲಿ ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವೂ ಒಂದಾಗಿದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ ಕರೆಯಲಾಗುತ್ತಿತ್ತು. ಮುಖ್ಯ ದೇಗುಲದ ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ.




